Photo : Reuters
ಗಾಝಾ: ಕದನ ವಿರಾಮದ ಹೊರತಾಗಿಯೂ ಗಾಝಾದಲ್ಲಿ ಬುಧವಾರ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ಕನಿಷ್ಠ ಇಬ್ಬರು ಫೆಲೆಸ್ತೀನೀಯರನ್ನು ಹತ್ಯೆ ಮಾಡಿವೆ. ಇಬ್ಬರು ಗಾಯಾಳುಗಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ ಕಲ್ಲುಮಣ್ಣಿನ ರಾಶಿಯಿಂದ 59 ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಕದನ ವಿರಾಮ ಒಪ್ಪಂದದಡಿ ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಯನ್ನು ಸಂಭ್ರಮಿಸಿದ 12 ಫೆಲೆಸ್ತೀನೀಯರನ್ನು ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ಪಡೆಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಹಮಾಸ್ ಧ್ವಜವನ್ನು ಬೀಸುತ್ತಾ, ಗನ್‍ಗಳಿಂದ ಗಾಳಿಗೆ ಗುಂಡು ಹಾರಿಸುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೀಡಿಯೊ ದೃಶ್ಯಾವಳಿಯನ್ನು ಗಮನಿಸಿ 12 ಫೆಲೆಸ್ತೀನೀಯರನ್ನು ಬಂಧಿಸಿರುವುದಾಗಿ ಇಸ್ರೇಲ್‍ನ ಆಂತರಿಕ ಭದ್ರತಾ ಸೇವೆ ಮತ್ತು ಪೊಲೀಸರು ಹೇಳಿದ್ದಾರೆ.