EBM News Kannada
Leading News Portal in Kannada

ಡಬ್ಲ್ಯು ಎಚ್‌ಓ ಜೊತೆ ಕಾರ್ಯಾಚರಿಸದಂತೆ ಅಮೆರಿಕ ಆರೋಗ್ಯ ಇಲಾಖೆಗೆ ಟ್ರಂಪ್ ಆದೇಶ

0


ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ)ಯ ಜೊತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವಂತೆ ಅಮೆರಿಕದ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಟ್ರಂಪ್ ಸರಕಾರ ಆದೇಶಿಸಿದೆ.

ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ಅಧಿಕಾರಿ ಜಾನ್ ನಿಕೆಂಗಾಸಾಂಗ್ ಅವರು ಸಾರ್ವಜನಿಕ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸೋಮವಾರ ರಾತ್ರಿ ವಿಜ್ಞಾಪನಾ ಪತ್ರವೊಂದನ್ನು ರವಾನಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ಕೆಲಸ ಮಾಡುವ ಅಮೆರಿಕ ಆರೋಗ್ಯ ಇಲಾಖೆಯ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ(ಸಿಡಿಸಿ)ದ ಎಲ್ಲಾ ಸಿಬ್ಬಂದಿ, ಡಬ್ಲ್ಯೂಎಚ್‌ಓ ಸಹಯೋಗದೊಂದಿಗೆ ನಡೆಸುವ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಆದೇಶದವರೆಗೆ ಕಾಯಬೇಕು ಎಂದು ಅದರಲ್ಲಿ ಆದೇಶಿಸಲಾಗಿದೆ.

ಸಮನ್ವಯ ಕೇಂದ್ರಗಳು, ಸಲಹಾ ಮಂಡಳಿಗಳು, ಸಹಕಾರಿ ಒಪ್ಪಂದಗಳು ಇತ್ಯಾದಿಗಳ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಕೆಲಸ ಮಾಡುವ ಎಲ್ಲಾ ಸಿಡಿಸಿ ಸಿಬ್ಬಂದಿಗೆ ಈ ಆದೇಶ ಅನ್ವಯವಾಗಲಿದೆ ಎಂದು ವಿಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿಗಳಿಗೆ ಭೇಟಿ ನೀಡದಂತೆಯೂ ಸಿಡಿಸಿ ಸಿಬ್ಬಂದಿಗೆ ಸೂಚಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವು ನಿರ್ಗಮಿಸುವ ಪ್ರಕ್ರಿಯನ್ನು ಆರಂಭಿಸುವ ಕಾರ್ಯಾದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಜಾರಿಗೊಳಿಸಿದ್ದರು. ಆದರೆ ಡಬ್ಲ್ಯುಎಚ್‌ಓನಿಂದ ಅಮೆರಿಕ ನಿರ್ಗಮನಕ್ಕೆ ಸಂಸತ್‌ನ ಅನುಮೋದನೆಯ ಅಗತ್ಯವಿರುವುದರಿಂದ ಮತ್ತು ಅದರ ಪ್ರಸಕ್ತ ವರ್ಷದ ಹಣಕಾಸು ಬಾಧ್ಯತೆಗಳನ್ನು ಅಮೆರಿಕ ಪೂರೈಕೆ ಮಾಡುತ್ತಿರುವುದರಿಂದ ಈ ಕಾರ್ಯಾದೇಶವು ತಕ್ಷಣವೇ ಜಾರಿಗೆ ಬಂದಿರಲಿಲ್ಲ. ಅಲ್ಲದೆ ನಿಯಮಗಳ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸಲು ಅಮೆರಿಕವು ಒಂದು ವರ್ಷ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ.

Leave A Reply

Your email address will not be published.