EBM News Kannada
Leading News Portal in Kannada

ಕೆನಡ ಪ್ರಧಾನಿ ಸ್ಥಾನಕ್ಕೆ ಭಾರತೀಯ ಮೂಲದ ರೂಬಿ ದಲ್ಲಾ ಸ್ಪರ್ಧೆ

0


ಒಟ್ಟಾವ: ಜಸ್ಟಿನ್ ಟ್ರುಡೋ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆನಡದ ಪ್ರಧಾನಿ ಸ್ಥಾನಕ್ಕೆ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ರಾಜಕಾರಣಿ ರೂಬಿ ದಲ್ಲಾ ಅವರು ಸ್ಪರ್ಧಿಸಲಿದ್ದಾರೆ.

ಉದ್ಯಮಿ, ರೂಪದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ರೂಬಿ ದಲ್ಲಾ ಅವರು ತನ್ನ 14ನೇ ವಯಸ್ಸಿನಲ್ಲಿಯೇ ಲಿಬರಲ್ ಪಕ್ಷದ ಕಾರ್ಯಕರ್ತೆಯಾಗಿದ್ದರು. 2004ರಿಂದ 2011ರವರೆಗೆ ಕೆನಡದ ಸಂಸತ್ ಸದಸ್ಯೆಯಾಗಿದ್ದು, ಬ್ರಾಂಪ್ಟನ್-ಸ್ಪ್ರಿಂಗ್ ಡೇಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕೆನಡ ಸಂಸತ್‌ಗೆ ಆಯ್ಕೆಯಾದ ಪ್ರಪ್ರಥಮ ಸಿಖ್ಖ್ ಮಹಿಳೆಯೆಂಬ ದಾಖಲೆಯನ್ನೂ ಕೂಡಾ ಅವರು ಹೊಂದಿದ್ದಾರೆ.

ತಾನು ಅಧಿಕಾರಕ್ಕೇರಿದಲ್ಲಿ ಕೆನಡ ಜನತೆಯನ್ನು ಬಾಧಿಸುತ್ತಿರುವ ಅಧಿಕ ತೆರಿಗೆ ಹಾಗೂ ಬೆಲೆಯೇರಿಕೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಭಾರತ ಸೇರಿದಂತೆ ವಿವಿಧ ದೇಶಗಳ ಜೊತೆ ಸ್ನೇಹ ಹಾಗೂ ವಾಣಿಜ್ಯ ಪಾಲುದಾರಿಕೆಯನ್ನು ಸುಧಾರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಮಾನವಕಳ್ಳಸಾಗಣೆಯನ್ನು ಹಾಗೂ ಅಕ್ರಮ ವಲಸೆಯನ್ನು ತಡೆಗಟ್ಟುವ ಮತ್ತು ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ.

1974ರಲ್ಲಿ ಸಿಖ್ಖ್ ಕುಟುಂಬದಲ್ಲಿ ಜನಿಸಿದ ರೂಬಿ ಬಲ್ಲಾ ಅರವು ಪಂಜಾಬ್‌ನಿಂದ ಕೆನಡದ ವಿನ್ನಿಪೆಗ್‌ಗೆ ವಲಸೆ ಬಂದಿದ್ದರು. ದಲ್ಲಾ ಅವರು 10ನೇ ವಯಸ್ಸಿನವರಾಗಿದ್ದಾಗ, ಸ್ವರ್ಣಮಂದಿರದಲ್ಲಿ ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯನ್ನು ವಿರೋಧಿಸಿ ಆಗಿನ ಭಾರತ ಪ್ರಧಾನಿ ಇಂದಿರಾಗಾಂಧಿಗೆ ಪತ್ರ ಬರೆಯುವ ಮೂಲಕ ಗಮನಸೆಳೆದಿದ್ದರು.

ಆಕೆಯ ಪತ್ರಕ್ಕೆ ಉತ್ತರಿಸಿದ ಇಂದಿರಾಗಾಂಧಿ ಅವರು ಭಾರತಕ್ಕೆ ಆಗಮಿಸುವಂತೆ ಅವರಿಗೆ ಆಹ್ವಾನ ನೀಡಿದ್ದರು. ಆದಾಗ್ಯೂ ದಲ್ಲಾ ಅವರ ಭೇಟಿಗೆ ಮುನ್ನವೇ ಇಂದಿರಾಗಾಂಧಿ ಹತ್ಯೆಯಾಗಿದ್ದರು.

Leave A Reply

Your email address will not be published.