ರಿಯಾದ್: ಮಹತ್ವದ ನೀತಿ ಬದಲಾವಣೆಯೊಂದರಲ್ಲಿ, ಪವಿತ್ರ ನಗರಗಳಾದ ಮಕ್ಕಾ ಹಾಗೂ ಮದೀನಾದಲ್ಲಿ ಕಾರ್ಯಾಚರಿಸುತ್ತಿರುವ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರಿಗೆ ಸೌದಿ ಅರೇಬಿಯಾದ ಬಂಡವಾಳ ಮಾರುಕಟ್ಟೆ ಪ್ರಾಧಿಕಾರ ಅನುಮತಿ ನೀಡಿದೆ.
ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಆರ್ಥಿಕ ಬೆಳವಣಿಗೆಗೆ ಚುರುಕು ಮುಟ್ಟಿಸಲು ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ನಗದು ಹರಿವನ್ನು ಉತ್ತೇಜಿಸಲು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಿದೆ.
ಹೊಸ ಹೂಡಿಕೆ ನೀತಿಯನ್ವಯ, ಮಕ್ಕಾ ಹಾಗೂ ಮದೀನಾ ನಗರಗಳಲ್ಲಿ ಸೌದಿ ಅರೇಬಿಯಾ ಪಟ್ಟಿ ಮಾಡಿರುವ ರಿಯಲ್ ಎಸ್ಟೇಟ್ ಕಂಪನಿಗಳ ಶೇರುಗಳನ್ನು ವಿದೇಶಿ ಹೂಡಿಕೆದಾರರು ಖರೀದಿಸಬಹುದಾಗಿದೆ. ಸೌದಿ ಪ್ರಜೆಗಳು ಮಾತ್ರವಲ್ಲದೇ ವಿದೇಶಿಯರು ಈ ವಲಯದಲ್ಲಿ ಶೇ. 49ರಷ್ಟು ಸಮಗ್ರ ಮಾಲಕತ್ವವನ್ನು ಹೊಂದಬಹುದಾಗಿದೆ. ಆದರೆ, ವ್ಯೂಹಾತ್ಮಕ ವಿದೇಶಿ ಹೂಡಿಕೆದಾರರನ್ನು ಶೇರುಗಳು ಮಾಲಕತ್ವ ಹೊಂದುವುದರಿಂದ ಹೊರಗೇ ಉಳಿಯಲಿವೆ.
ಈ ನಡೆಯು ಸೌದಿ ಅರೇಬಿಯಾದ ವಿಶನ್ 2030 ಯೊಂದಿಗೆ ಹೊಂದಾಣಿಕೆಯಾಗುತ್ತಿದ್ದು, ಆರ್ಥಿಕತೆಯನ್ನು ವೈವಿಧ್ಯಮಯವಾಗಿಸುವ ಹಾಗೂ ಬಂಡವಾಳ ಮಾರುಕಟ್ಟೆಯ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಿಷ್ಠಗೊಳಿಸುವ ಗುರಿ ಹೊಂದಿದೆ. ಮಕ್ಕಾ ಹಾಗೂ ಮದೀನಾಗಳಲ್ಲಿ ಹೂಡಿಕೆ ಅವಕಾಶಗಳನ್ನು ಮುಕ್ತಗೊಳಿಸುವ ಮೂಲಕ, ಅಂತಾರಾಷ್ಟ್ರೀಯ ನಿಧಿಯನ್ನು ಆಕರ್ಷಿಸುವ ಹಾಗೂ ಪ್ರಾಂತೀಯ ಹಣಕಾಸು ತಾಣವನ್ನಾಗಿ ತನ್ನ ಮಾರುಕಟ್ಟೆ ಸ್ಥಿತಿಯನ್ನು ಎತ್ತಿ ಹಿಡಿಯುವ ಗುರಿಯನ್ನು ಬಂಡವಾಳ ಹೂಡಿಕೆ ಪ್ರಾಧಿಕಾರ ಹೊಂದಿದೆ.