ಇಸ್ಲಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತದ ಕೈಗಾರಿಕಾ ಪ್ರದೇಶದಲ್ಲಿ ಎಲ್ಪಿಜಿ ತುಂಬಿದ್ದ ಟ್ಯಾಂಕರ್ ಸ್ಫೋಟಿಸಿ ಬಾಲಕಿ, ಇಬ್ಬರು ಮಹಿಳೆಯರ ಸಹಿತ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು ಇತರ 31 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮುಲ್ತಾನ್ನ ಹಮೀದ್ಪುರ್ ಕನೋರ ಪ್ರದೇಶದ ಕೈಗಾರಿಕಾ ಎಸ್ಟೇಟ್ನಲ್ಲಿ ದುರಂತ ಸಂಭವಿಸಿದೆ. ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಎಲ್ಪಿಜಿ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಿಸಿದೆ. ಗ್ಯಾಸ್ ಸೋರಿಕೆಯಾಗುತ್ತಿರುವುದು ತಿಳಿದು ಬರುತ್ತಿದ್ದಂತೆಯೇ ಅಕ್ಕಪಕ್ಕದ ಹಲವು ಮನೆಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಕ್ಷಣಾರ್ಧದಲ್ಲಿ ಗ್ಯಾಸ್ ಟ್ಯಾಂಕರ್ಗೆ ಬೆಂಕಿ ಆವರಿಸಿಕೊಂಡು ಸ್ಫೋಟಿಸಿದ್ದು ಬೆಂಕಿಯಿಂದ ಉರಿಯುತ್ತಿದ್ದ ವಾಹನದ ಚೂರು ಅಕ್ಕಪಕ್ಕದ ಮನೆಗಳಿಗೆ ಬಡಿದು ಹಲವು ಮನೆಗಳೂ ಬೆಂಕಿಯಲ್ಲಿ ಸುಟ್ಟುಹೋಗಿ ವ್ಯಾಪಕ ನಾಶ-ನಷ್ಟ ಸಂಭವಿಸಿದೆ.
10ಕ್ಕೂ ಅಧಿಕ ಅಗ್ನಿಶಾಮಕ ಯಂತ್ರಗಳು ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಿವೆ. ಟ್ಯಾಂಕರ್ ಸ್ಫೋಟಗೊಂಡ ಸ್ಥಳದಲ್ಲಿ ಐದು ಮೃತದೇಹಗಳು ಹಾಗೂ ಬೆಂಕಿಯಿಂದ ಸುಟ್ಟುಹೋದ ಮನೆಯೊಂದರಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಸುಟ್ಟ ಗಾಯಗಳಾಗಿರುವ 31 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು 13 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.