ವಾಷಿಂಗ್ಟನ್: ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದ ಫೆಬ್ರವರಿ 18ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಮೆರಿಕ ಹೇಳಿದೆ.
ಕಳೆದ ವರ್ಷದ ನವೆಂಬರ್ನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ ಜನವರಿ 26ರ ಒಳಗೆ ದಕ್ಷಿಣ ಲೆಬನಾನ್ನಿಂದ ಇಸ್ರೇಲಿ ಪಡೆಗಳು ವಾಪಸಾಗಬೇಕು. ಆದರೆ ಈ ಗಡುವಿನ ಒಳಗೆ ಪಡೆಯ ವಾಪಸಾತಿ ಅಸಾಧ್ಯವಾಗಿದ್ದು ಈ ವಿಷಯದಲ್ಲಿ ಮಾಡಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ. ಜತೆಗೆ, ಹಿಜ್ಬುಲ್ಲಾ ಗುಂಪು ಕೂಡಾ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಆದ್ದರಿಂದ ಹೆಚ್ಚುವರಿ 30 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಇಸ್ರೇಲ್ ರವಿವಾರ ಹೇಳಿತ್ತು.
ಅಮೆರಿಕದಿಂದ ಮೇಲ್ವಿಚಾರಣೆ ಮಾಡಲ್ಪಟ್ಟಿರುವ ಲೆಬನಾನ್ ಮತ್ತು ಇಸ್ರೇಲ್ ನಡುವಿನ ವ್ಯವಸ್ಥೆಯು 2025ರ ಫೆಬ್ರವರಿ 18ರವರೆಗೆ ಜಾರಿಯಲ್ಲಿರುತ್ತದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಲೆಬನಾನ್ ವಿಸ್ತೃತ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಲೆಬನಾನ್ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ. 2023ರ ಅಕ್ಟೋಬರ್ 7ರ ಬಳಿಕ ಸೆರೆಹಿಡಿಯಲಾದ ಲೆಬನಾನ್ನ ಕೈದಿಗಳನ್ನು ಹಿಂದಿರುಗಿಸಲು ಲೆಬನಾನ್, ಇಸ್ರೇಲ್ ಮತ್ತು ಅಮೆರಿಕ ಮಾತುಕತೆಗಳನ್ನು ಪ್ರಾರಂಭಿಸುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.