EBM News Kannada
Leading News Portal in Kannada

`ಪನಾಮಾ ಕಾಲುವೆ ಬೆದರಿಕೆ’ಯ ಬಗ್ಗೆ ಆತಂಕ | ಟ್ರಂಪ್ ವಿರುದ್ಧ ವಿಶ್ವಸಂಸ್ಥೆಗೆ ಪನಾಮಾ ದೂರು | Concerns over ‘Panama Canal threat’

0


ವಿಶ್ವಸಂಸ್ಥೆ : ಪನಾಮಾ ಕಾಲುವೆಯನ್ನು ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ `ಆತಂಕಕಾರಿ’ ಬೆದರಿಕೆಯ ಬಗ್ಗೆ ಪನಾಮಾ ವಿಶ್ವಸಂಸ್ಥೆಗೆ ದೂರು ನೀಡಿರುವುದಾಗಿ ವರದಿಯಾಗಿದೆ.

ಇದೇ ವೇಳೆ, ಅಂತರ್ಸಾಗರ ಜಲಮಾರ್ಗದ ಎರಡು ಬಂದರುಗಳನ್ನು ನಿರ್ವಹಿಸುತ್ತಿರುವ ಹಾಂಕಾಂಗ್ ಸಂಯೋಜಿತ ಎರಡು ಸಂಸ್ಥೆಗಳ ಲೆಕ್ಕಪತ್ರ ಪರಿಶೀಲನೆಯನ್ನೂ ಪನಾಮಾ ಆರಂಭಿಸಿದೆ.

ಪನಾಮಾ ನಗರದ ಆಡಳಿತವು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ಗೆ ಬರೆದಿರುವ ಪತ್ರದಲ್ಲಿ `ಯಾವುದೇ ಸದಸ್ಯರನ್ನು ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬೆದರಿಕೆ ಅಥವಾ ಬಲದ ಬಳಕೆಯನ್ನು ತಡೆಯುವ’ ವಿಶ್ವಸಂಸ್ಥೆಯ ಚಾರ್ಟರ್ನ(ಸನದು) ವಿಧಿಯನ್ನು ಉಲ್ಲೇಖಿಸಿದೆ ಹಾಗೂ ಈ ವಿಷಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಉಲ್ಲೇಖಿಸಲು ಆಗ್ರಹಿಸಿದೆ.

1999ರಲ್ಲಿ ಅಮೆರಿಕವು ಪನಾಮಾಕ್ಕೆ ಹಸ್ತಾಂತರಿಸಿದ್ದ ಪನಾಮಾ ಕಾಲುವೆಯ ಸುತ್ತ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ ಚೀನಾ ಪನಾಮಾ ಕಾಲುವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ ಎಂದು ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದ ಟ್ರಂಪ್ ಆರೋಪಿಸಿದ್ದರು. `ನಾವು ಅದನ್ನು ಚೀನಾಕ್ಕೆ ನೀಡಿದ್ದಲ್ಲ. ಪನಾಮಾಕ್ಕೆ ನೀಡಿದ್ದೆವು. ಈಗ ಅದನ್ನು ವಾಪಾಸು ತೆಗೆದುಕೊಳ್ಳುತ್ತೇವೆ’ ಎಂದು ಟ್ರಂಪ್ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪನಾಮಾದ ಲೆಕ್ಕಪತ್ರ ನಿರ್ವಹಣಾಧಿಕಾರಿಯ ಕಚೇರಿ `ಪನಾಮಾ ಬಂದರುಗಳನ್ನು ನಿರ್ವಹಿಸುವ ಸಂಸ್ಥೆಗಳ ಪರಿಣಾಮಕಾರಿತ್ವ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಪಾರದರ್ಶಕ ಬಳಕೆಯನ್ನು ಖಾತರಿಪಡಿಸುವ ಉದ್ದೇಶದಿಂದ ಸಮಗ್ರ ಲೆಕ್ಕಪರಿಶೋಧನೆಯನ್ನು ನಡೆಸುವುದಾಗಿ’ ಘೋಷಿಸಿತ್ತು. ಹಾಂಕಾಂಗ್ ಮೂಲದ ಸಿ.ಕೆ.ಹಚಿಸನ್ ಹೋಲ್ಡಿಂಗ್ಸ್ ಸಂಸ್ಥೆ ಪನಾಮಾ ಕಾಲುವೆಯ ಎರಡು ಬದಿಗಳಲ್ಲಿರುವ ಬಲ್ಬೋವಾ ಮತ್ತು ಕ್ರಿಸ್ಟೋಬಲ್ ಬಂದರುಗಳನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆಗಳು ನಿಗದಿಪಡಿಸಿದ ರಿಯಾಯ್ತಿ ಒಪ್ಪಂದಗಳನ್ನು ಅನುಸರಿಸುತ್ತಿದೆಯೇ, ಸರಕಾರದ ಖಜಾನೆಗೆ ಎಷ್ಟು ಆದಾಯವನ್ನು ಪಾವತಿಸುತ್ತಿದೆ ಎಂಬುದನ್ನು ನಿರ್ಧರಿಸುವ ಉದ್ದೇಶವಿದೆ ಎಂದು ಲೆಕ್ಕಪತ್ರ ನಿರ್ವಹಣಾಧಿಕಾರಿ ಹೇಳಿದ್ದಾರೆ.

ಕಾಲುವೆ ತಟಸ್ಥತೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಕಾಲುವೆಯಲ್ಲಿ ಯಾವುದೇ ರಾಷ್ಟ್ರ ಹಸ್ತಕ್ಷೇಪ ನಡೆಸುತ್ತಿಲ್ಲ ಎಂದು ಪನಾಮಾ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಹೇಳಿದ್ದಾರೆ. ಟ್ರಂಪ್ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು `ಕಾಲುವೆ ಪನಾಮಾದ್ದೇ ಆಗಿದೆ ಮತ್ತು ಪನಾಮಾದ ಬಳಿಯೇ ಉಳಿಯಲಿದೆ’ ಎಂದಿದ್ದಾರೆ.

ಅಮೆರಿಕದ ಕಂಟೈನರ್ ಟ್ರಾಫಿಕ್ನ 40%ದಷ್ಟು ಪನಾಮಾ ಕಾಲುವೆಯ ಮೂಲಕ ಪ್ರಯಾಣಿಸುತ್ತದೆ. ಪನಾಮಾ ಕಾಲುವೆಯನ್ನು ಅತ್ಯಧಿಕ ಬಳಸುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. 2000ನೇ ಇಸವಿಯಿಂದ ಪನಾಮಾ ಸಮುದ್ರ ಮಾರ್ಗವು ಪನಾಮಾ ಸರಕಾರದ ಖಜಾನೆಗೆ 30 ಶತಕೋಟಿ ಡಾಲರ್ಗೂ ಅಧಿಕ ವರಮಾನವನ್ನು ಒದಗಿಸಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 2.5 ಶತಕೋಟಿ ಡಾಲರ್ ಕೊಡುಗೆ ನೀಡಿದೆ. ಕಾಲುವೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯಬೇಕು ಎಂದು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಸಂಸದರು ಆಗ್ರಹಿಸುತ್ತಿದ್ದು ಅಗತ್ಯಬಿದ್ದರೆ ಮಿಲಿಟರಿ ಬಲ ಬಳಸುವಂತೆ ಒತ್ತಡ ಹೇರುತ್ತಿದ್ದಾರೆ.

Leave A Reply

Your email address will not be published.