ನ್ಯೂಯಾರ್ಕ್ : ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ದೇಶ ಹೊರ ಬರುವ ಆದೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು COVID-19 ಸಾಂಕ್ರಾಮಿಕ ರೋಗ ಮತ್ತು ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪದಗ್ರಹಣದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರಲಿದೆ ಎಂದು ಘೋಷಿಸಿದ್ದರು.
ಸದಸ್ಯ ರಾಷ್ಟ್ರಗಳ ರಾಜಕೀಯ ಪ್ರಭಾವದಿಂದ WHO ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ. ಡಬ್ಲ್ಯುಎಚ್ಒ ನಮ್ಮನ್ನು ಅಳಿಸಿ ಹಾಕಲು ನೋಡಿತು, ಎಲ್ಲರೂ ನಮ್ಮನ್ನು ತುಳಿಯಲು ನೋಡಿದರು, ಆದರೆ ಇದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ವಿಶ್ವಸಂಸ್ಥೆಗೆ ಚೀನಾಕ್ಕಿಂತ ಹೆಚ್ಚಿನ ಹಣವನ್ನು ಅಮೆರಿಕ ಪಾವತಿಸುತ್ತಿತ್ತು. ಬಿಡೆನ್ ಆಡಳಿತದ ಅವಧಿಯಲ್ಲಿ ಅಮೆರಿಕವು WHOಗೆ ಅತಿದೊಡ್ಡ ನಿಧಿ ನೀಡುವ ದೇಶವಾಗಿ ಮುಂದುವರಿದಿತ್ತು. ಅಮೆರಿಕವು ಡಬ್ಲ್ಯುಎಚ್ಒ ಗೆ ಅತಿದೊಡ್ಡ ಆರ್ಥಿಕ ಬೆಂಬಲವಾಗಿತ್ತು. ಡಬ್ಲ್ಯುಎಚ್ಒನ ಒಟ್ಟು ನಿಧಿಯ ಶೇ 18ರಷ್ಟು ಕೊಡುಗೆಯನ್ನು ಅಮೆರಿಕ ನೀಡುತ್ತಿತ್ತು. ಈ ಬೆಳವಣಿಗೆ ಡಬ್ಲ್ಯುಎಚ್ಒ ಕಾರ್ಯಚರಣೆ ಮೇಲೆ ಪರಿಣಾಮ ಬೀರಲಿದೆ. ಸಂಸ್ಥೆಯೊಂದಿಗೆ ಕೆಲಸ ಮಾಡುವ ತನ್ನ ದೇಶದ ಸಿಬ್ಬಂದಿಗಳನ್ನು ಅಮೆರಿಕ ವಾಪಸ್ ಕರೆಸಿಕೊಳ್ಳಲಿದೆ ಎಂದು ಹೇಳಲಾಗಿದೆ.