EBM News Kannada
Leading News Portal in Kannada

ಗಾಝಾ ಕದನ ವಿರಾಮ ಒಪ್ಪಂದದ ಅಂತಿಮ ಕರಡು ಸಿದ್ಧ | ಇಸ್ರೇಲ್, ಹಮಾಸ್‍ಗೆ ಹಸ್ತಾಂತರಿಸಿದ ಖತರ್: ವರದಿ | Final draft of Gaza ceasefire agreement ready

0


ದೋಹ: ಗಾಝಾದಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಅಂತಿಮ ಕರಡನ್ನು ಇಸ್ರೇಲ್ ಮತ್ತು ಹಮಾಸ್‍ಗೆ ಖತರ್ ಹಸ್ತಾಂತರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್’ ಸೋಮವಾರ ವರದಿ ಮಾಡಿದೆ.

ರವಿವಾರ ತಡರಾತ್ರಿ ಖತರ್ ರಾಜಧಾನಿ ದೋಹಾದಲ್ಲಿ ಆರಂಭವಾದ ಸಭೆಯಲ್ಲಿ ಖತರ್ ಪ್ರಧಾನಿ, ಇಸ್ರೇಲ್ ಗುಪ್ತಚರ ಏಜೆನ್ಸಿ ಮುಖ್ಯಸ್ಥ ಮತ್ತು ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಅವರ ಮಧ್ಯಪೂರ್ವ ರಾಯಭಾರಿ ಸ್ಟೀವ್ ವಿಟ್ಕಾಫ್ ಪಾಲ್ಗೊಂಡಿದ್ದರು. ಸ್ಟೀವ್ ವಿಟ್ಕಾಫ್ ಇಸ್ರೇಲಿ ನಿಯೋಗದ ಮೇಲೆ ಒತ್ತಡ ಹೇರಿದರೆ, ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್‍ಥಾನಿ ಹಮಾಸ್ ನಿಯೋಗದ ಮೇಲೆ ಒತ್ತಡ ಹೇರಿದರು. ಈಜಿಪ್ಟ್ ಪ್ರತಿನಿಧಿ ಹಸನ್ ಮಹ್ಮೂದ್ ಅವರೂ ಎರಡೂ ನಿಯೋಗದ ಜತೆ ಸಂಪರ್ಕದಲ್ಲಿದ್ದರು.

ಮಾತುಕತೆ ಸೋಮವಾರ ಬೆಳಗ್ಗಿನವರೆಗೂ ಮುಂದುವರಿದಿದ್ದು ಬಳಿಕ ಒಪ್ಪಂದದ ಕರಡನ್ನು ಅಂತಿಮಗೊಳಿಸಲಾಗಿದೆ. ಇದಕ್ಕೂ ಮುನ್ನ ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. ಜನವರಿ 20ರಂದು ಬೈಡನ್ ಅಧಿಕಾರ ಬಿಟ್ಟುಕೊಡುವುದಕ್ಕೂ ಮುನ್ನ ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಬೇಕೆಂಬುದು ಅಮೆರಿಕದ ಆಶಯವಾಗಿದೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿದ ರಾಯ್ಟರ್ಸ್ ವರದಿ ಹೇಳಿದೆ.

ಖತರ್ ಲ್ಲಿ ಇಸ್ರೇಲ್ ಮತ್ತು ಹಮಾಸ್ ನಿಯೋಗಕ್ಕೆ ಒಪ್ಪಂದದ ಕರಡು ಹಸ್ತಾಂತರಗೊಂಡಿದೆ. ಕರಡು ಪ್ರಸ್ತಾವನೆಯಲ್ಲಿರುವ ಅಂಶದ ಬಗ್ಗೆ ಇಸ್ರೇಲ್ ನಿಯೋಗವು ಇಸ್ರೇಲ್‌ ನ ಆಡಳಿತಕ್ಕೆ ವಿವರಿಸಿದೆ. ಪ್ರಸ್ತಾವನೆಯ ಕುರಿತು ಹಮಾಸ್ ಉತ್ತರಿಸಿದರೆ ಕೆಲ ದಿನಗಳಲ್ಲೇ ಒಪ್ಪಂದ ಅಂತಿಮಗೊಳ್ಳಬಹುದು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ದೋಹಾದಿಂದ ಲಭಿಸಿದ ಮಾಹಿತಿಗಳು ಅತ್ಯಂತ ಭರವಸೆದಾಯಕವಾಗಿದೆ. ಅಂತರಗಳನ್ನು ಕಿರಿದಾಗಿಸಲಾಗುತ್ತಿದೆ ಮತ್ತು ಮುಂದಿನ ಎರಡು ಮೂರು ದಿನ ಎಲ್ಲವೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದರೆ ಒಪ್ಪಂದದ ಹತ್ತಿರ ತಲುಪಬಹುದು ಎಂದು ಫೆಲೆಸ್ತೀನ್ ಮೂಲಗಳು ಪ್ರತಿಕ್ರಿಯಿಸಿವೆ.

ಗಾಝಾದಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದಕ್ಕಾಗಿ ಅಮೆರಿಕ, ಖತರ್ ಮತ್ತು ಈಜಿಪ್ಟ್ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಪ್ರಯತ್ನ ಮುಂದುವರಿಸಿವೆ. ಹಮಾಸ್‌ ನ ಹಿಡಿತದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್‌ ನ ವಶದಲ್ಲಿರುವ ಫೆಲೆಸ್ತೀನೀಯರ ಬಿಡುಗಡೆಯ ಷರತ್ತಿಗೆ ಎರಡೂ ಕಡೆಯವರು ಬಹುತೇಕ ಸಮ್ಮತಿಸಿದ್ದರು. ಆದರೆ ಗಾಝಾದಿಂದ ಇಸ್ರೇಲ್ ತನ್ನ ಪಡೆಯನ್ನು ಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹಮಾಸ್ ಪಟ್ಟುಹಿಡಿದರೆ, ಹಮಾಸ್ ಅನ್ನು ಗಾಝಾದಿಂದ ಕಿತ್ತುಹಾಕುವ ವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳುತ್ತಿದೆ.

Leave A Reply

Your email address will not be published.