ಕೀವ್: ದಕ್ಷಿಣ ಉಕ್ರೇನ್‌ನ ನಗರ ಝಪೊರಿಝ್‌ಝಿಯಾದಲ್ಲಿ ಬುಧವಾರ ಹಗಲಿನಲ್ಲಿ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 13 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ಇತರ 30 ಮಂದಿ ಗಾಯಗೊಂಡಿದ್ದಾರೆ.
ಕ್ಷಿಪಣಿ ದಾಳಿಯಿಂದಾಗಿ ನೆಲಸಮಗೊಂಡಿರುವ ಕಟ್ಟಡಗಳ ಅವಶೇಷಗಳ ನಡುವೆ ಹಲವಾರು ನಾಗರಿಕರು ಬಿದ್ದುಕೊಂಡಿರುವುದನ್ನು ಹಾಗೂ ಅವರಿಗೆ ತುರ್ತುಸೇವಾಸಂಸ್ಥೆಗಳು ಚಿಕಿತ್ಸೆ ನೀಡುತ್ತಿರುವ ಮತ್ತು ಸ್ಟ್ರೆಚರ್‌ಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯಗಳ ವಿಡಿಯೋವನ್ನು ಉಕ್ರೇನ್ ಅಧ್ಯಕ್ಷ ವೊಲೊದಿವಿರ್ ಝೆಲೆನ್‌ಸ್ಕಿ ಅವರು ಪೋಸ್ಟ್ ಮಾಡಿದ್ದಾರೆ.
ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧದಲ್ಲಿ ರಶ್ಯವು ಆಗಾಗ್ಗೆ ನಾಗರಿಕ ಪ್ರದೇಶಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದೆ. ಎರಡನೇ ಮಹಾಯುದ್ಧದ ಬಳಿಕ ಯುರೋಪ್‌ನಲ್ಲಿ ನಡೆದಿರುವ ಈ ಅತಿ ದೊಡ್ಡ ಕದನದಲ್ಲಿ ಸಾವಿರಾರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.
ಕರ್ಸ್ಕ್ ಪ್ರಾಂತದಲ್ಲಿ ಉಕ್ರೇನ್ ಪ್ರತಿದಾಳಿಗಳನ್ನು ನಡೆಸಿರುವುದಾಗಿ ಉಕ್ರೇನ್ ಹೇಳಿದೆ.
ಬುಧವಾರ ಮಧ್ಯಾಹ್ನ ಝಫೋರಿಝ್‌ಝಿಯಾದಲ್ಲಿ ರಶ್ಯನ್ ವಾಯುಪಡೆ ಗ್ಲೈಡ್ ಬಾಂಬ್‌ಗನ್ನು ಎಸೆದಿತ್ತು. ಈ ಪೈಕಿ ಎರಡು ಬಾಂಬ್‌ಗಳು ನಗರದಲ್ಲಿರುವ ವಸತಿ ಪ್ರದೇಶಗಳ ಮೇಲೆ ಬಿದ್ದಿವೆ ಎಂದು ಫೆಡೊರೊವ್ ತಿಳಿಸಿದ್ದಾರೆ.
ರಶ್ಯದ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಗುರುವಾರ ಆ ಪ್ರಾಂತದಲ್ಲಿ ಶೋಕಾಚರಣೆಯನ್ನು ಘೋಷಿಸಲಾಗುವುದು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ರಶ್ಯವು ಝಫೋರಿಝ್‌ಝಿಯಾ ನಗರದ ಮೇಲೆ ಬಾಂಬ್ ದಾಳಿಯನ್ನು ನಡೆಸಿರುವುದನ್ನು ಅವರು ಕಟುವಾದ ಪದಗಳಲ್ಲಿ ಖಂಡಿಸಿದ್ದಾರೆ. ‘‘ ಜನಸಾಮಾನ್ಯರು ಯಾತನೆಗೊಳಗಾಗುತ್ತಾರೆ ಎಂದು ತಿಳಿದೂ, ನಗರದ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸುವಷ್ಟು ಘೋರ ಕ್ರೌರ್ಯ ಇನ್ನೊಂದಿಲ್ಲ’’ ಎಂದು ಅವರು ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಬರೆದಿದ್ದಾರೆ.
ಉಕ್ರೇನ್ ಯುದ್ಧವನ್ನು ಕೊನೆಗೊಳಿಸಬೇಕೆಂದು ಬಯಸುವ ದೇಶಗಳು, ಉಕ್ರೇನ್‌ಗೆ ಭವಿಷ್ಯನಲ್ಲಿ ಅದರ ಆತ್ಮರಕ್ಷಣೆಯ ಕುರಿತು ಭರವಸೆಯನ್ನು ನೀಡಬೇಕಾಗಿದೆ ಎಂದು ಝೆಲೆನ್‌ಸ್ಕಿ ಬುಧವಾರ ಹೇಳಿದ್ದರು.
ಯಾವುದೇ ಕದನವಿರಾಮ ಅಥವಾ ಶಾಂತಿ ಒಪ್ಪಂದ ಏರ್ಪಡುವುದರಿಂದ ರಶ್ಯಕ್ಕೆ ಶಸ್ತ್ರಾಸ್ತ್ರಗಳನ್ನು ಜಮಾವಣೆಗೊಳಿಸಲು ಹಾಗೂ ಮತ್ತೊಮ್ಮೆ ದಾಳಿಯನ್ನು ನಡೆಸಲು ಸಾಧ್ಯವಾಗಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.
ಉಕ್ರೇನ್ ತಕ್ಷಣವೇ 32 ರಾಷ್ಟ್ರಗಳ ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಅಮೆರಿಕ,ಹಂಗರಿ, ಜರ್ಮನಿ ಹಾಗೂ ಸ್ಲೋವಾಕಿಯಾ ದೇಶಗಳು ಅಡ್ಡಗಾಲು ಹಾಕುತ್ತಿವೆಂದು ಝೆಲೆನ್‌ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದರು.