ಡಮಾಸ್ಕಸ್ : ಬಂಡುಕೋರರ ವಶದಲ್ಲಿರುವ ಸಿರಿಯಾದ ವಿವಿಧೆಡೆ ಇಸ್ರೇಲ್ ಮಂಗಳವಾರವೂ ವಾಯುದಾಳಿಗಳನ್ನು ನಡೆಸಿದೆೆ ಮತ್ತು ಅದರ ಟ್ಯಾಂಕ್ ಪಡೆಗಳು ಸಿರಿಯದ ಗಡಿಭಾಗದೆಡೆಗೆ ಮುನ್ನುಗ್ಗುತ್ತಿವೆ ಎಂದು ಸಿರಿಯದ ಪ್ರತಿಪಕ್ಷ ಯುದ್ಧ ನಿಗಾವಣೆ ಸಂಸ್ಥೆಯು ತಿಳಿಸಿದೆ.
ಆದರೆ ತನ್ನ ಪಡೆಗಳು ರಾಜಧಾನಿ ದಮಾಸ್ಕಸ್‌ನತ್ತ ಧಾವಿಸುತ್ತವೆ ಎಂಬ ಆರೋಪಗಳನ್ನುಇಸ್ರೇಲ್ ನಿರಾಕರಿಸುತ್ತಿದೆ. ಆದರೆ ದಮಾಸ್ಕಸ್‌ನ ಹೊರವಲಯದ ಪ್ರದೇಶಗಳಲ್ಲಿ ವಾಯುದಾಳಿಯ ಭಾರೀ ವಾ ಸದ್ದುಗಳು ಕೇಳಿಬಂದಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯ ವರದಿಗಾರರು ತಿಳಿಸಿದ್ದಾರೆ.ಸಿರಿಯ ವಿವಿಧೆಡೆ ಇಸ್ರೇಲ್ ನಾಶಪಡಿಸಿರುವ ಕ್ಷಿಪಣಿ ಉಡಾವಕಗಳು, ಹೆಲಿಕಾಪ್ಟರ್‌ಗಳು ಹಾಗೂ ಯುದ್ಧ ವಿಮಾನಗಳ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಹಯಾತ್ ತಾಹ್ರಿರ್ ಅಲ್ ಶಮ್ (ಎಚ್‌ಟಿಎಸ್) ನೇತೃತ್ವ ದ ಬಂಡುಕೋರ ಗುಂಪುಗಳಿಂದ ಇಸ್ರೇಲ್ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಅಸ್ಸಾದ್ ಆಡಳಿತ ಪತಗೊಳ್ಳುತ್ತಿದ್ದಂತೆಯೇ ಇಸ್ರೇಲ್ ಸಿರಿಯಾ ಗಡಿಯಲ್ಲಿರುವ 400 ಚದರ ಕಿ.ಮೀ. ವಿಸ್ತೀರ್ಣದ ಬಫರ್ ವಲಯ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
1971ರ ಮಧ್ಯಪ್ರಾಚ್ಯ ಯುದ್ಧದ ಬಳಿಕ ಬಫರ್ ವಲಯವನ್ನು ಸೃಷ್ಟಿಸಲಾಗಿತ್ತು. ಬಶರ್ ಅಸ್ಸಾದ್‌ಅವರ ಆಡಳಿತದ ಪತನ ನಂತರ ತನ್ನ ಮೇಲೆ ಬಂಡುಕೋರರು ದಾಳಿಗಳನ್ನು ನಡೆಸುವುದನ್ನು ತಡೆಯುವ ಉದ್ದೇಶದಿಂದ ತಾನು ಈ ದಾಳಿಯನ್ನು ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.ಅಸ್ಸಾದ್ ಆಡಳಿತಾವಧಿಯಲ್ಲಿ ಸಿರಿಯದಲ್ಲಿ ದಾಸ್ತಾನುಗೊಂಡಿದ್ದ ಶಂಕಿತ ರಾಸಾಯನಿಕ ಅಸ್ತ್ರಗಳು ಹಾಗೂ ಭಾರೀ ಶಸ್ತ್ರಾಸ್ತ್ರಗಳು ಬಂಡುಕೋರರ ಕೈಸೇರುವುದನ್ನು ತಪ್ಪಿಸಲು ದಾಳಿಗಳನ್ನು ನಡೆಸುವುದಾಗಿ ಅದು ಹೇಳಿದೆ.
ವಾರಾಂತ್ಯದಲ್ಲಿ ಅಸ್ಸಾದ್ ಸರಕಾರವನ್ನು ಬಂಡುಕೋರರು ಪತನಗೊಳಿಸಿದ ಬಳಿಕ ಇಸ್ರೇಲ್ ಸಿರಿಯದಾದ್ಯಂತ 300ಕ್ಕೂ ಅಧಿಕ ವಾಯುದಾಳಿಗಳನ್ನು ನಡೆಸಿದೆ ಎಂದು ಬ್ರಿಟನ್ ಮೂಲದ ಮಾನವಹಕ್ಕು ಸಂಘಟನೆ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ ತಿಳಿಸಿದೆ.
ಲೆಬನಾನ್ ಜೊತೆಗಿನ ಸಿರಿಯದ ಗಡಿಭಾಗದೆಡೆಗೆ ಇಸ್ರೇಲ್ ಪಡೆಗಳು ಮುನ್ನುಗ್ಗುತ್ತಿರುವುದಾಗಿ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಹಾಗೂ ಬೈರೂತ್ ಮೂಲದ ಮಯಾದೀನ್ ಟಿವಿ ತಿಳಿಸಿದೆ.
ಆದರೆ ಇಸ್ರೇಲಿ ಟ್ಯಾಂಕ್‌ಗಳು ಮಾಸ್ಕಸ್‌ನತ್ತ ಧಾವಿಸುತ್ತಿವೆಯೆಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳಲ್ಲಿ ಹುರುಳಿಲ್ಲವೆಂದು ಇಸ್ರೇಲ್‌ನ ಸೇನಾ ವಕ್ತಾರ ಲೆ.ಕ. ನಡಾವ್ ಶೋಶಾನಿ ತಿಳಿಸಿದ್ದಾರೆ.
ಇಸ್ರೇಲ್ ಅನ್ನು ರಕ್ಷಿಸುವ ಉದ್ದೇಶದಿಂದ ಇಸ್ರೇಲಿ ಪಡೆಗಳು ಬಫರ್ ವಲಯದೊಳಗೆ ನಿಯೋಜನೆಗೊಂಡಿವೆಯೆಂದು ಅವರು ಹೇಳಿದ್ದಾರೆ.
► ಸಿರಿಯಾದಲ್ಲಿ ಇಸ್ರೇಲ್ ದಾಳಿಗೆ ಸೌದಿ, ಈಜಿಪ್ಟ್, ಜೋರ್ಡಾನ್ ಖಂಡನೆ
ಈ ಮಧ್ಯೆ ಸಿರಿಯದೊಳಗೆ ಇಸ್ರೇಲ್ ಸೇನೆಯ ಒಳನುಸುಳುವಿಕೆಯನ್ನು ಈಜಿಪ್ಟ್, ಜೋರ್ಡಾನ್ ಹಾಗೂ ಸೌದಿ ಆರೇಬಿಯ ಮತ್ತಿತರ ದೇಶಗಳು ಖಂಡಿಸಿವೆ ಹಾಗೂ ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘೆನೆಯಾಗಿದೆ ಎಂದು ಹೇಳಿದೆ.
ಗೋಲನ್ ಹೈಟ್ಸ್ ಪ್ರದೇಶದ ಬಫರ್‌ವಲಯದ ಆಕ್ರಮಿಸುವಿಕೆ ಹಾಗೂ ಸಿರಿಯದ ಮೇಲಿನ ದಾಳಿಯು ಅಂತಾರಾಷ್ಟ್ರೀಯ ಕಾನೂನಿ ತತ್ವಗಳ ನಿರಂತರ ಉಲ್ಲಂಘನೆಯು ಸಿರಿಯದಲ್ಲಿ ಭದ್ರತೆ, ಸ್ಥಿರತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸುವ ಅವಕಾಶಗಳಿಗೆ ಹಾನಿಯುಂಟು ಮಾಡುತ್ತಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.