ದಮಾಸ್ಕಸ್ : ಸಿರಿಯಾದ ಪ್ರಮುಖ ನಗರ ಹಮಾದತ್ತ ಮುಂದುವರಿಯುತ್ತಿರುವ ಬಂಡುಕೋರ ಪಡೆ ಮತ್ತೆ 4 ನಗರಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ಕಳೆದ ವಾರ ಕೈತಪ್ಪಿ ಹೋಗಿದ್ದ ಕೆಲವು ಪ್ರದೇಶಗಳನ್ನು ಸರ್ಕಾರಿ ಪಡೆ ಮರಳಿ ಪಡೆದುಕೊಂಡಿವೆ ಎಂದು ಸಿರಿಯಾ ಸರಕಾರದ ಮೂಲಗಳು ಹೇಳಿವೆ. ಮಧ್ಯ ಸಿರಿಯಾದ ಹಲ್ಫಾಯ, ತಯ್ಬಾತ್ ಅಲ್-ಇಮಾಮ್, ಮಾರ್ದಿಸ್ ಮತ್ತು ಸೊರಾನ್ ನಗರಗಳನ್ನು ವಶಪಡಿಸಿಕೊಳ್ಳಲಾಗಿದ್ದು ಸರ್ಕಾರಿ ಪಡೆಯ 50 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಬಂಡುಕೋರ ಪಡೆಯ ಮೂಲಗಳು ಹೇಳಿವೆ.
ನಗರಗಳ ಸುತ್ತಮುತ್ತ ತೀವ್ರ ಹೋರಾಟ ನಡೆಯುತ್ತಿದ್ದು ಸಿರಿಯಾ ಮತ್ತು ರಶ್ಯದ ವಾಯುಪಡೆಗಳು ವೈಮಾನಿಕ ದಾಳಿ ನಡೆಸುತ್ತಿವೆ ಎಂದು ಮಾನವ ಹಕ್ಕುಗಳ ನಿಗಾ ಏಜೆನ್ಸಿ ಹೇಳಿದೆ. ಬಂಡುಕೋರ ಪಡೆಯ ನಿಯಂತ್ರಣದಲ್ಲಿರುವ ಅಲೆಪ್ಪೋ ನಗರವನ್ನು ಸಂಪರ್ಕಿಸುವ ರಸ್ತೆಯ ಬಳಿಯ ಖಾನಸೆರ್ ಗ್ರಾಮವನ್ನು ಸರ್ಕಾರಿ ಪಡೆ ವಶಕ್ಕೆ ಪಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.