EBM News Kannada
Leading News Portal in Kannada

ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಿ ನಾವು ಏಕತೆಯ ಕಡೆ ಮುನ್ನಡೆಯಬೇಕು: ಯು.ಟಿ. ಖಾದರ್

0


ರೋಮ್, ಡಿ.2: ಎಲ್ಲ ಧರ್ಮಗ್ರಂಥಗಳ ಸಾರವೇ ಇದು – “ನಾವೆಲ್ಲರೂ ಒಂದೇ”. ಇದು ಯಾವ ಕಾಲದಲ್ಲೂ ಬದಲಾವಣೆಯಾಗುವುದಿಲ್ಲ ಎನ್ನುವ ಮೂಲಭೂತ ಸತ್ಯವನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. ಭಾಷೆ, ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ನಾವು ವೈವಿಧ್ಯತೆ ಹೊಂದಿದ್ದರೂ, ಪ್ರತಿಯೊಬ್ಬರೊಳಗೆ ಇರುವ ದೈವಿಕ ಚೇತನವು ಒಂದೇ. ಸಾಮರಸ್ಯ ಎಂದರೆ, ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಅಳಿಸಿಹಾಕಬೇಕೆಂದಲ್ಲ. ಅವೆಲ್ಲವನ್ನೂ ಸ್ವೀಕರಿಸಿ ನಾವು ಏಕತೆಯ ಕಡೆ ಮುನ್ನಡೆಯಬೇಕು ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ಕಳೆದ ಶತಮಾನದಲ್ಲಿ ನಡೆದ ಗಮನಾರ್ಹವಾದ ಪ್ರಗತಿಗಳು ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನದಲ್ಲಿ ನಡೆದ ಅನ್ವೇಷಣೆಗಳು ಮತ್ತು ಜಾಗತೀಕರಣದ ಪರಿಣಾಮವಾಗಿ ಜಗತ್ತಿನ ಜನರು ಭೌತಿಕವಾಗಿ ಹತ್ತಿರವಾಗಿದ್ದಾರೆ. ಆದರೆ ನಮ್ಮ ಹೃದಯಗಳು ಸಾಕಷ್ಟು ದೂರವಾಗಿದೆ. ಸಮಾಜದಲ್ಲಿ ಎಲ್ಲಾ ವರ್ಗಗಳ ಜನರ ಕೂಗು, ಸಂಘರ್ಷಗಳು ಮತ್ತು ಈ ಜಗತ್ತಿನ ಮೌನ ರೋಧನೆಗಳು ನಮ್ಮೆಲ್ಲರ ತುರ್ತು ಗಮನಕ್ಕೆ ಕಾದಿವೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ರೋಮಿನ ವ್ಯಾಟಿಕನ್ ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ ನಡೆದ “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು” ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾದ ಮೂರು ದಿನಗಳ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ಐತಿಹಾಸಿಕ ಭಾಷಣ ಮಾಡಿದರು.

ನಾನು ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ, ಭಾರತದಿಂದ ಬಂದಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ವಿಶ್ವ ಕ್ರೈಸ್ತ ಧರ್ಮ ಗುರು, ಅತ್ಯಂತ ಗೌರವಾನ್ವಿತ ಮತ್ತು ವಂದನೀಯ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಿರುವುದು ನನಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಿದೆ ಎಂದು ಹೇಳಿದರು.

ನೂರು ವರ್ಷಗಳ ನಂತರ ಈ ಮೈಲಿಗಲ್ಲನ್ನು ಆಚರಿಸುವುದು ಕೇವಲ ಒಂದು ಸ್ಮರಣಾರ್ಥ ಸಮ್ಮೇಳನವಾಗಿ ಮಾತ್ರವಲ್ಲ, ಇದು ಹೊಸ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ನೀಡುವಂತಹ ಒಂದು ಶಕ್ತಿಯುತ ಕರೆಯಾಗಿದೆ. ಯಾವುದೇ ಧರ್ಮ ಮತ್ತು ಸಮಾಜವು ಕೀಳರಿಮೆ ಹಾಗೂ ಪ್ರತ್ಯೇಕತೆಯನ್ನು ಅನುಭವಿಸುವ ವಾತಾವರಣವಿರಬಾರದು ಎಂದರು.

ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ. ನಾವು ವೈವಿಧ್ಯತೆಗಳನ್ನು ಹೊಂದಿದ್ದರೂ, ಪ್ರತಿಯೊಬ್ಬರೊಳಗಿರುವ ದೈವಿಕ ಚೇತನವು ಒಂದೇ. ಸಮಾಜವನ್ನು ಮುನ್ನಡೆಸುವ ನನ್ನ ಸಹೋದರ ಸಹೋದರಿಯರೇ, ನಾವಿಂದು ದ್ವೇಷವನ್ನು ತಿರಸ್ಕರಿಸುವ ಪ್ರತಿಜ್ಞೆ ಮಾಡೋಣ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಅವರು ಹೇಳಿದರು.

ಭಾಷಣದ ಕನ್ನಡ ಸಾರಾಂಶದ ಪೂರ್ಣಪಾಠ ಇಲ್ಲಿದೆ…

ಗೌರವಾನ್ವಿತ ಗಣ್ಯರೇ, ಪೂಜ್ಯ ಆಧ್ಯಾತ್ಮಿಕ ನಾಯಕರೇ, ಸತ್ಯದ ಅನ್ವೇಷಕರೇ , ಶಾಂತಿಯ ಪ್ರತಿಪಾದಕರೇ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಎಲ್ಲರಿಗೂ ನನ್ನ ನಮಸ್ಕಾರಗಳು.

1924ರಲ್ಲಿ ಭಾರತದ ಕೇರಳ ರಾಜ್ಯದ ಆಲುವಾದಲ್ಲಿರುವ ಅದ್ವೈತ ಆಶ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆಯೋಜಿಸಿದ್ದ ಮೊದಲ ಅಂತರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವದ ಸ್ಮರಣಾರ್ಥ ನಡೆಸುತ್ತಿರುವ ಈ ಐತಿಹಾಸಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರಕಿರುವುದು ನನಗೆ ಗೌರವ ಮತ್ತು ಸಂತೋಷದ ವಿಷಯವಾಗಿದೆ.

ವಿವಿಧ ಧರ್ಮಗಳ ಪುರೋಹಿತರು, ಚಿಂತಕರು ಮತ್ತು ನಾಯಕರು ಒಂದೇ ವೇದಿಕೆಯಲ್ಲಿ ಸೇರಿ, ಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯ ಮಹತ್ವದ ಸಂದೇಶವನ್ನು ನೀಡಿದ ಅಂದಿನ ಆ ಸರ್ವಧರ್ಮ ಸಮ್ಮೇಳನವು, ಆ ಕಾಲಘಟ್ಟದಲ್ಲಿ ಸಮಾಜದಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಿದ ಹಾಗೂ ತಾತ್ವಿಕ ಚಿಂತನೆಗಳ ಏಕತೆಯನ್ನು ಸೃಷ್ಟಿಸಲು ಹೆಜ್ಜೆ ಇಟ್ಟ ಮಹತ್ವದ ಘಟನೆಯಾಗಿತ್ತು. ಸಮಾಜದಲ್ಲಿ ವ್ಯಾಪಕವಾದ ತಾರತಮ್ಯ ಮತ್ತು ವಿಭಜನೆ ಅತಿ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು, ಆದರ್ಶಗಳು ಮತ್ತು ಸಾಮಾಜಿಕ ಸುಧಾರಣೆಗಳು ಜನರ ಬದುಕಿಗೆ ಸಾಂತ್ವನದ ಬೆಳಕನ್ನು ನೀಡುವ ದಾರಿದೀಪವಾಗಿ ಪರಿಣಮಿಸಿತ್ತು.

“ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು” ಎಂಬ ಅವರ ಬೋಧನೆಯು ಕೇರಳದಲ್ಲಿ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಪ್ರತಿಪಾದಿಸುವ ಮಹತ್ವದ ಸಾಮಾಜಿಕ ಆಂದೋಲನವನ್ನು ಸೃಷ್ಟಿಸಿತ್ತು. ಜೊತೆಗೆ, ಶ್ರೀ ನಾರಾಯಣ ಗುರುಗಳು ಸಮಾಜದ ಸಬಲೀಕರಣ ಮತ್ತು ಉನ್ನತೀಕರಣದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಗಾಢವಾದ ಅರಿವು ಮೂಡಿಸಿದವರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಹಾಗೆಯೇ, ನನಗೆ ಮತ್ತು ನನ್ನಂತಹ ಅಸಂಖ್ಯಾತರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದತೆಯಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ನೂರು ವರ್ಷಗಳ ನಂತರ ಈ ಮೈಲಿಗಲ್ಲನ್ನು ಆಚರಿಸುವುದು ಕೇವಲ ಒಂದು ಸ್ಮರಣಾರ್ಥ ಸಮ್ಮೇಳನವಾಗಿ ಮಾತ್ರವಲ್ಲ-ಇದು ಹೊಸ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ನೀಡುವಂತಹ ಒಂದು ಶಕ್ತಿಯುತ ಕರೆಯಾಗಿದೆ.

ಕಳೆದ ಶತಮಾನದಲ್ಲಿ ನಡೆದ ಗಮನಾರ್ಹವಾದ ಪ್ರಗತಿಗಳು, ವಿಶೇಷವಾಗಿ ತಂತ್ರಜ್ಞಾನದಲ್ಲಿ ನಡೆದ ಅನ್ವೇಷಣೆಗಳು ಮತ್ತು ಜಾಗತೀಕರಣದ ಪರಿಣಾಮವಾಗಿ, ನಾವು ಬೌತಿಕವಾಗಿ ಹತ್ತಿರವಾಗಿದ್ದೇವೆ. ಆದರೆ, ನಮ್ಮ ಹೃದಯಗಳು ಮತ್ತಷ್ಟು ದೂರ ಹೋಗಿವೆ. ಅಸಮಾನತೆ, ಅಜ್ಞಾನ, ಅಸಹಿಷ್ಣುತೆ ಮತ್ತು ಪೂರ್ವಾಗ್ರಹಗಳಿಂದ ಪ್ರೇರಿತವಾದ ಭಯ ಮತ್ತು ಅಪನಂಬಿಕೆಗಳು ನಮ್ಮ ಮನಸ್ಸುಗಳನ್ನು ಆವರಿಸಿಕೊಂಡಿವೆ. ಇದರ ಪರಿಣಾಮವಾಗಿ, ಮಾನವೀಯತೆಯ ಮೂಲಭೂತ ಮೌಲ್ಯಗಳು ಮಸುಕಾಗಿವೆ. ಸಮಾಜದಲ್ಲಿ ಎಲ್ಲಾ ವರ್ಗಗಳ ಜನರ ಕೂಗು, ಸಂಘರ್ಷಗಳು ಮತ್ತು ಈ ಜಗತ್ತಿನ ಮೌನ ರೋಧನೆಗಳು ನಮ್ಮೆಲ್ಲರ ತುರ್ತು ಗಮನಕ್ಕೆ ಕಾದಿವೆ. ಸಮ್ಮೇಳನದ ಈ ಮಹತ್ವಪೂರ್ಣ ಕ್ಷಣಗಳು ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಪುನರ್ಮನನ ಮಾಡುವ ಕ್ಷಣಗಳು ಮಾತ್ರವಲ್ಲ, ಅದು ಧಾರ್ಮಿಕ ಧ್ರುವೀಕರಣ, ಸಾಮಾಜಿಕ ಅನ್ಯಾಯ ಮತ್ತು ಅಂತರ್ಧರ್ಮೀಯ ಸಂವಾದದ ನಿರ್ಣಾಯಕ ಅಗತ್ಯವನ್ನು ಸ್ಪಷ್ಟವಾಗಿ ಎಲ್ಲರಿಗೆ ಸೂಚಿಸುವ ಸಮಯೋಚಿತ ಜ್ಞಾಪನೆಯಾಗಿವೆ.

ಆದ್ದರಿಂದ “ಮಾನವೀಯತೆಗಾಗಿ ಧರ್ಮಗಳ ಏಕತೆ” ಎಂಬ ಈ ವಿಶ್ವ ಸಮ್ಮೇಳನವನ್ನು ಆಯೋಜಿಸಿದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘದ ಟ್ರಸ್ಟ್‌ನ ಅಧ್ಯಕ್ಷರಾದ ಸ್ವಾಮಿ ಸಚ್ಚಿದಾನಂದರಿಗೆ, ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗುಯಿಕ್ಸೊಟ್, M.C.C.J. ಅಂತರಧರ್ಮಿಯ ಸಂವಾದದ ಡಿಕ್ಯಾಸ್ಟರಿಯ ಪ್ರಿಫೆಕ್ಟ್, ಕಾರ್ಡಿನಲ್- ಡೆಸಿಗ್ನೇಟ್ ಮಾನ್ಸಿಂಜರ್ ಜಾರ್ಜ್ ಕೂವಕಾಡ್ ಮತ್ತು ಅವರ ತಂಡಕ್ಕೆ, ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಇಂದು ನಾವು ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕತೆಯ ಸಾರವನ್ನು ಸಾರುವ ಪವಿತ್ರ ನಗರವಾದ ವ್ಯಾಟಿಕನ್‌ನಲ್ಲಿ ಒಟ್ಟು ಸೇರಿದ್ದೇವೆ. ಈ ಶುಭ ಸಂದರ್ಭದಲ್ಲಿ ನನಗೆ ನನ್ನ ತಾಯ್ನಾಡಾದ ಭಾರತದ ಪೂಜ್ಯ ಋಷಿ ಮುನಿಗಳ “ವಸುಧೈವ ಕುಟುಂಬಕಂ” – ಜಗತ್ತು ಒಂದೇ ಕುಟುಂಬ ಎನ್ನುವ ಅಮರ ನುಡಿಗಳು ನೆನಪಿಗೆ ಬರುತ್ತದೆ. ಎಲ್ಲರೂ ನಮ್ಮವರು ಎನ್ನುವ ಈ ಪ್ರಾಚೀನ ಮಂತ್ರವು ಇಂದಿನ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ನಮ್ಮ ದೇಶದ ಸಂವಿಧಾನದ ಆದರ್ಶವನ್ನೂ ಪ್ರತಿಬಿಂಬಿಸುತ್ತದೆ. ತಾರತಮ್ಯ ಮತ್ತು ವಿಭಜನೆಯಿಂದ ನಲುಗುತ್ತಿರುವ ಸಮಾಜದಲ್ಲಿ ಪ್ರಬಲ ಧ್ವನಿಗಳು ದ್ವೇಷವನ್ನು ಪ್ರಚೋದಿಸುತ್ತಿರುವಾಗ, ನಾವು ಒಗ್ಗಟ್ಟಾಗಿ ಏಕತೆ ಮತ್ತು ಸಹಿಷ್ಣುತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕು.

ವಿಶ್ವ ಕ್ರೈಸ್ತ ಧರ್ಮ ಗುರು, ಅತ್ಯಂತ ಗೌರವಾನ್ವಿತ ಮತ್ತು ವಂದನೀಯ ಪೋಪ್ ಫ್ರಾನ್ಸಿಸ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಿರುವುದು, ನನಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಿದೆ. ಪೋಪ್ ಫ್ರಾನ್ಸಿಸ್ ಅವರ ಸಹೃದಯತೆ, ಪ್ರೀತಿ ಮತ್ತು ಔದಾರ್ಯವು ನನ್ನ ಹೃದಯವನ್ನು ಸ್ಪರ್ಶಿಸಿದೆ. ಅಂತರ್ಧರ್ಮೀಯ ಸಂವಾದದ ಮೂಲಕ, ಅವರು ಶಾಂತಿ, ನ್ಯಾಯ ಮತ್ತು ಸಹಿಷ್ಣುತೆಯನ್ನು ಪ್ರೋತ್ಸಾಹಿಸುವ 21ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಗುರುಗಳಾಗಿದ್ದಾರೆ ಎಂದು ಹೇಳಲು ಸಂತೋಷ ಪಡುತ್ತೇನೆ.

ಪ್ರತಿಯೊಂದು ಧರ್ಮಗ್ರಂಥ, ನಂಬಿಕೆ ಮತ್ತು ಆಧ್ಯಾತ್ಮಿಕ ಮಾರ್ಗದ ಮೂಲ ತತ್ವವು ಅಚಲವಾದ ಪ್ರೀತಿ ಮತ್ತು ಕರುಣೆಯಾಗಿದೆ. ಅದು ಪವಿತ್ರ ಬೈಬಲ್, ಕುರಾನ್, ವೇದಗಳು, ಧಮ್ಮಪದ ಅಥವಾ ಟೋರಾ ಆಗಿರಲಿ, ಎಲ್ಲ ಧರ್ಮಗ್ರಂಥಗಳ ಸಾರವೇ ಇದು: “ನಾವೆಲ್ಲರೂ ಒಂದೇ”. ಇದು ಯಾವ ಕಾಲದಲ್ಲೂ ಬದಲಾವಣೆಯಾಗುವುದಿಲ್ಲ ಎನ್ನುವ ಮೂಲಭೂತ ಸತ್ಯವನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. ಭಾಷೆ, ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ನಾವು ವೈವಿಧ್ಯತೆ ಹೊಂದಿದ್ದರೂ, ಪ್ರತಿಯೊಬ್ಬರೊಳಗೆ ಇರುವ ದೈವಿಕ ಚೇತನವು ಒಂದೇ. ಸಾಮರಸ್ಯ ಎಂದರೆ, ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಅಳಿಸಿಹಾಕಬೇಕೆಂದಲ್ಲ. ಅವೆಲ್ಲವನ್ನೂ ಸ್ವೀಕರಿಸಿ ನಾವು ಏಕತೆಯ ಕಡೆ ಮುನ್ನಡೆಯಬೇಕು. ದೈವತ್ವವು ಕೂಡಾ ವೈವಿಧ್ಯತೆಯಲ್ಲಿಯೇ ಪ್ರಕಟವಾಗುತ್ತದೆಯೇ ಹೊರತು, ಏಕತಾನತೆಯಲ್ಲಿ ಅಲ್ಲ.

ಯಾವುದೇ ಧರ್ಮವು ಕೀಳರಿಮೆಯಿಂದ ಬಳಲಬಾರದು, ಯಾವುದೇ ವರ್ಗವು ಪ್ರತ್ಯೇಕತೆಯನ್ನು ಅನುಭವಿಸಬಾರದು. ಧಾರ್ಮಿಕ ನಂಬಿಕೆಗಳು ಸ್ಪರ್ಧೆಯ ವಿಷಯವಲ್ಲ; ಅವು ಸಹಯೋಗ ಮತ್ತು ಸತ್ಯದ ಕಡೆಗೆ ನಂಬಿಕೆಯ ಪಯಣವಾಗಿದೆ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ. ಕಾಮನಬಿಲ್ಲಿನ ವೈಭವವನ್ನು ಸೃಷ್ಟಿಸಲು ಅನೇಕ ಬಣ್ಣಗಳು ಸಾಮರಸ್ಯದಿಂದ ಬೆರೆತಂತೆ, ನಾವು ವೈವಿಧ್ಯತೆಯ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು. ಅದು ಗಾಯ ಮಾಡುವ ಕತ್ತಿಯಂತೆ ಅಲ್ಲ, ಬದಲಾಗಿ ಗಾಯವನ್ನು ಗುಣಪಡಿಸುವ ಔಷಧಿಯಂತೆ ಆಗಬೇಕು.

ಏಕತೆ ಕೇವಲ ನಮ್ಮ ಆಲೋಚನೆಗಳಲ್ಲಿ ಇದ್ದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಲು ನಾವು ಪ್ರಯತ್ನಿಸಬೇಕು. ಜಗತ್ತಿಗೆ ಹೆಚ್ಚು ಸಿದ್ಧಾಂತಗಳ ಅವಶ್ಯಕತೆಯಿಲ್ಲ, ಬದಲಾಗಿ, ನಮ್ಮ ದೈನಂದಿನ ಕಾರ್ಯಗಳಲ್ಲಿ ಕರುಣೆ ಮತ್ತು ಸಹಾನುಭೂತಿಯ ಅನುಷ್ಠಾನದ ಅವಶ್ಯಕತೆ ಇದೆ. ನಿಜವಾದ ಧರ್ಮವು ಬಾಯಿಮಾತಿನ ಭೋದನೆಯಲ್ಲಿಲ್ಲ, ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ಹಸ್ತದಲ್ಲಿ, ತುಳಿತಕ್ಕೊಳಗಾದವರನ್ನು ಮೇಲೆತ್ತಲು ಮಾಡುವ ಪ್ರಯತ್ನದಲ್ಲಿ, ಅನ್ಯಾಯಕ್ಕೊಳಗಾದವರ ಪರವಾಗಿ ನಾವು ಎತ್ತುವ ಧ್ವನಿಯಲ್ಲಿ ಅಡಕವಾಗಿದೆ.

ಸಮಾಜವನ್ನು ಮುನ್ನಡೆಸುವ ನನ್ನ ಸಹೋದರ ಸಹೋದರಿಯರೇ, ನಾವಿಂದು ದ್ವೇಷವನ್ನು ತಿರಸ್ಕರಿಸುವ ಪ್ರತಿಜ್ಞೆ ಮಾಡೋಣ. ನಾವು ಇಲ್ಲಿ ಸೇರಿರುವುದು ಮನಸ್ಸುಗಳ ನಡುವೆ ಗೋಡೆಗಳನ್ನು ನಿರ್ಮಿಸಲು ಅಲ್ಲ, ಪರಸ್ಪರ ಅರ್ಥಮಾಡಿಕೊಂಡು, ನಂಬಿಕೆಯ ಸೇತುವೆ ನಿರ್ಮಾಣ ಮಾಡಲು ಮತ್ತು ಸ್ವಸ್ಥ ಸಮಾಜವನ್ನು ಕಟ್ಟಲು.

ನಮ್ಮ ಧರ್ಮ ವೇದಿಕೆಗಳು ಭಯವನ್ನು ಹುಟ್ಟಿಸುವುದಕ್ಕಿಂತ, ಜನರಲ್ಲಿ ಭರವಸೆ ಮತ್ತು ಪ್ರೀತಿ ಮೂಡಿಸಲು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳಿಗೆ ಸರ್ವಧರ್ಮ ಶಿಕ್ಷಣವನ್ನು ನೀಡುವುದು ಅತ್ಯವಶ್ಯಕವಾಗಿದೆ. ಅವರ ಪರಿಶುದ್ಧ ಮನಸ್ಸಿನಲ್ಲಿ ಅವರ ಧಾರ್ಮಿಕ ನಂಬಿಕೆಗಳ ಇತಿಹಾಸದ ಜೊತೆಗೆ, ಇತರ ಧರ್ಮಗಳ ತತ್ವಗಳ ಸೌಂದರ್ಯವನ್ನೂ ಪರಿಚಯಿಸೋಣ. ಬ್ರಹ್ಮಶ್ರೀ ನಾರಾಯಣ ಗುರುಗಳ ಕಾಲಾತೀತ ಸಂದೇಶವಾದ “ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು ” ಎಂಬ ಪರಿಕಲ್ಪನೆಯನ್ನು ಅವರಿಗೆ ಮನನ ಮಾಡಿಸಿ, ಅವರು ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಮಾಡಿ, ಆ ಮೂಲಕ ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡೋಣ.

ವಿಶ್ವದ ಅತಿ ಪವಿತ್ರ ನಗರವೆಂದೇ ಖ್ಯಾತಿಯಾಗಿರುವ ವ್ಯಾಟಿಕನ್ ಸಿಟಿಯಲ್ಲಿ ನಡೆದ ಈ ವಿಶ್ವ ಸರ್ವಧರ್ಮ ಸಮ್ಮೇಳನವು ಮಾನವೀಯತೆಯನ್ನು ಜಗತ್ತಿಗೆ ಸಾರಿ, ಎಲ್ಲ ವೈವಿಧ್ಯತೆಗಳನ್ನು ಮೀರಿ, ಎಲ್ಲಾ ತತ್ವಗಳನ್ನು ಆಲಂಗಿಸಿ, ಒಂದು ಹೊಸ ಯುಗದ ಉದಯವಾಗುವಂತೆ ಮಾಡುವಂತಾಗಲಿ ಎಂದು ಹಾರಿಸುತ್ತೇನೆ.

“ವಿಶ್ವದಲ್ಲಿ ಶಾಂತಿ ಸದಾ ನೆಲೆಸಲಿ, ಮಾನವೀಯತೆ ಚಿರಾಯುವವಾಗಲಿ. ಜೈ ಹಿಂದ್!”

Leave A Reply

Your email address will not be published.