ವಾಷಿಂಗ್ಟನ್: ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್, ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ವಿರುದ್ಧ, ಹೂಡಿಕೆದಾರರಿಗೆ ವಂಚಿಸಿದ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನ ಎಕ್ಸಿಕ್ಯೂಟಿವ್ ಗಳಾದ ಗೌತಮ್ ಅದಾನಿ (62), ಅವರ ಅಳಿಯ ಸಾಗರ್ ಅದಾನಿ (30), ಅಝೂರ್ ಪವರ್ ಗ್ಲೋಬಲ್ ಲಿಮಿಟೆಡ್ ನ ಎಕ್ಸಿಕ್ಯೂಟಿವ್ ಸಿರಿಲ್ ಕ್ಯಾಬೆನೆಸ್ ವಿರುದ್ಧ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆಯ ಪಿತೂರಿ ನಡೆಸಿದ ಆರೋಪ ಹೊರಿಸಲಗಿದೆ. ಜತೆಗೆ ಆಸ್ಟ್ರೇಲಿಯಾದ ಹೂಡಿಕೆದಾರರು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಿಂದ ನಿಧಿಯನ್ನು ಪಡೆಯಲು ರೂಪಿಸಿದ ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರ ಪಾತ್ರದ ಹಿನ್ನೆಲೆಯಲ್ಲಿ ಹಾಗೂ ತಪ್ಪುದಾರಿಗೆ ಎಳೆಯುವಂಥ ಹೇಳಿಕೆಗಳ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಸೆಕ್ಯುರಿಟಿಗಳ ವಂಚನೆ ನಡೆಸಿದ ಆರೋಪವೂ ಇದೆ.
ಭಾರತ ಸರ್ಕಾರ ನೀಡಿದ ಬಹುಕೋಟಿ ಡಾಲರ್ ಸೌರಶಕ್ತಿ ಯೋಜನೆಗಳಿಗೆ ಬಂಡವಾಳ ಒದಗಿಸಲು ಅದಾನಿ ಗ್ರೀನ್ ಮತ್ತು ಅಝೂರ್ ಪವರ್ ಕಂಪನಿಗಳು ಲಂಚ ಯೋಜನೆ ರೂಪಿಸಿವೆ ಎಂದು ಎಸ್ಇಸಿ ಆರೋಪಿಸಿದೆ. ಫೆಡರಲ್ ಸೆಕ್ಯುರಿಟೀಸ್ ಕಾನೂನನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದ್ದು, ಕಾಯಂ ಇಂಜಂಕ್ಷನ್, ಸಿವಿಲ್ ಪೆನಾಲ್ಟಿ ಮತ್ತು ಅಧಿಕಾರಿ ಹಾಗೂ ನಿರ್ದೇಶಕರಿಗೆ ನಿಷೇಧ ನೀಡುವಂತೆ ಕೋರಿದೆ.
ಈ ಯೋಜನೆಯಡಿ ಅದಾನಿ ಗ್ರೀನ್ಸ್ 175 ದಶಲಕ್ಷ ಡಾಲರ್ ಮೊತ್ತವನ್ನು ಅಮೆರಿಕನ್ ಹೂಡಿಕೆದಾರರಿಂದ ಪಡೆದಿದ್ದು, ಅಝೂರ್ ಪವರ್ನ ಷೇರುಗಳು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಮಾರಾಟವಾಗಿವೆ ಎಂದು ಎಸ್ಇಸಿ ಹೇಳಿಕೆ ನೀಡಿದೆ.