ರಿಯೊ ಡಿ ಜನೈರೊ: ಬ್ರೆಝಿಲ್ ನಲ್ಲಿ 20 ಪ್ರಮುಖ ಆರ್ಥಿಕತೆಗಳ ಗುಂಪಿನ ಶೃಂಗಸಭೆಯು ಈಗ ಮುಂದುವರಿದಿರುವ ಪ್ರಮುಖ ಯುದ್ಧಗಳು ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಕರೆ ನೀಡುವ ನಿರ್ಣಯವನ್ನು ಮಂಡಿಸಿದೆ.
ಗಾಝಾ ಪಟ್ಟಿಯಲ್ಲಿನ ದುರಂತ ಮಾನವೀಯ ಪರಿಸ್ಥಿತಿ ಮತ್ತು ಲೆಬನಾನ್‍ನಲ್ಲಿನ ಉಲ್ಬಣದ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದು, ಮಾನವೀಯ ನೆರವಿನ ಹರಿವನ್ನು ವಿಸ್ತರಿಸುವ ಮತ್ತು ನಾಗರಿಕರ ರಕ್ಷಣೆಯನ್ನು ಬಲಪಡಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಮಾನವೀಯ ನೆರವು ಪೂರೈಕೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ವಿಶ್ವಸಂಸ್ಥೆ ಸನದಿನ ಪ್ರಕಾರ, ಯಾವುದೇ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ಪ್ರಾದೇಶಿಕ ಸ್ವಾಧೀನ ಪಡೆಯಲು ಬೆದರಿಕೆ ಅಥವಾ ಬಲ ಪ್ರಯೋಗದಿಂದ ಎಲ್ಲಾ ದೇಶಗಳೂ ದೂರವಿರಬೇಕು.
ಅಂತರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಸೇರಿದಂತೆ ಅಂತರಾಷ್ಟ್ರೀಯ ಕಾನೂನುಗಳಿಗೆ ಎಲ್ಲಾ ಪಕ್ಷಗಳೂ ತಮ್ಮ ಜವಾಬ್ದಾರಿಗಳನ್ನು ಅನುಸರಿಸಬೇಕು ಮತ್ತು ಈ ನಿಟ್ಟಿನಲ್ಲಿ ನಾಗರಿಕರು ಮತ್ತು ಮೂಲಸೌಕರ್ಯಗಳ ವಿರುದ್ಧದ ಎಲ್ಲಾ ದಾಳಿಗಳನ್ನೂ ಖಂಡಿಸಿದೆ.
ಸ್ವಯಂ ನಿರ್ಣಯದ ಫೆಲೆಸ್ತೀನೀಯರ ಹಕ್ಕನ್ನು ದೃಢೀಕರಿಸುತ್ತಾ, ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳು ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ಶಾಂತಿಯಿಂದ ಅಕ್ಕಪಕ್ಕದಲ್ಲಿ ವಾಸಿಸುವ `ಎರಡು ದೇಶ ಪರಿಹಾರ ಸೂತ್ರಕ್ಕೆ’ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದೆ.
ವಿಶ್ವಸಂಸ್ಥೆಯ ಎನ್.2735 ನಿರ್ಣಯಕ್ಕೆ ಅನುಗುಣವಾಗಿ ಗಾಝಾದಲ್ಲಿ ಸಮಗ್ರ ಕದನ ವಿರಾಮವನ್ನು ಬೆಂಬಲಿಸಲು ಮತ್ತು ಲೆಬನಾನ್‍ನಲ್ಲಿ ಗಡಿರೇಖೆಯ ಎರಡೂ ಬದಿಗಳಲ್ಲಿನ ಪ್ರಜೆಗಳು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಲು ಅನುವು ಮಾಡಿಕೊಡುವ ಒಪ್ಪಂದವನ್ನು ಬೆಂಬಲಿಸಲು ನಾವು ಒಗ್ಗಟ್ಟಾಗಿದ್ದೇವೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
►ಭಯೋತ್ಪಾದನೆಗೆ ಖಂಡನೆ
ಬ್ರೆಝಿಲ್ ನ ರಿಯೊ ಡಿ ಜನೈರೋದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ಮುಖಂಡರು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದ್ದು ಯುದ್ಧಕ್ಕೆ ಶಾಂತಿಯುತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ವಿಶ್ವದಾದ್ಯಂತ ಸಂಘರ್ಷ ಮತ್ತು ಯುದ್ಧದಿಂದ ಆಗುತ್ತಿರುವ ಪ್ರತಿಕೂಲ ಪರಿಣಾಮಗಳು ಹಾಗೂ ಅಗಾಧವಾದ ಮಾನವ ಸಂಕಟಗಳನ್ನು ನಾವು ದುಃಖದಿಂದ ಗಮನಿಸುತ್ತಿದ್ದೇವೆ. ಈಗ ಮುಂದುವರಿದಿರುವ ಸಂಘರ್ಷಗಳು ಮತ್ತು ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳ ಕುರಿತ ನಮ್ಮ ರಾಷ್ಟ್ರೀಯ ನಿಲುವು ಮತ್ತು ನಿರ್ಣಯಗಳನ್ನು ಪುನರುಚ್ಚರಿಸುತ್ತೇವೆ. ಎಲ್ಲಾ ದೇಶಗಳೂ ವಿಶ್ವಸಂಸ್ಥೆಯ ಚಾರ್ಟರ್(ಸನದು)ನ ತತ್ವ ಮತ್ತು ಉದ್ದೇಶಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.