ಅಮೆರಿಕ: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಮಾತನಾಡಿದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ನಾನು ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಹೋರಾಟ ಮುಗಿದಿಲ್ಲ. ಅಮೆರಿಕದ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬೆನ್ನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ ಸಲ್ಲಿಸಿದ್ದಾರೆ, ಆದರ್ಶಗಳಿಗಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಮಹಿಳಾ ಹಕ್ಕುಗಳು, ಬಂದೂಕು ನಿಯಂತ್ರಣ ಮತ್ತು ಜನರ ಘನತೆ ಕಾಪಾಡುವ ದೃಷ್ಟಿಯಿಂದ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ನಾವು ದೇಶದ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ. ಚುನಾವಣಾ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ಇಂದು ಮುಂಜಾನೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿಗಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರ ಪ್ರಕ್ರಿಯೆ ಸುಗಮವಾಗಿಸಲು ನಾವು ಅವರಿಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.
ನನ್ನ ಹೃದಯ ಇಂದು ತುಂಬಿದೆ, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞತೆಗಳು. ಈ ಚುನಾವಣೆಯ ಫಲಿತಾಂಶವು ನಾವು ಬಯಸಿದ್ದಲ್ಲ. ಆದರೆ ನಾನು ಹೇಳುವುದನ್ನು ಕೇಳಿ, ನಾವು ನಾವು ಹೋರಾಡುವವರೆಗೂ ಅಮೆರಿಕದ ಭರವಸೆಯ ಬೆಳಕು ಯಾವಾಗಲೂ ಉರಿಯುತ್ತದೆ ಎಂದು ಹೇಳಿದ್ದಾರೆ. ಕಮಲಾ ಹ್ಯಾರಿಸ್ ಭಾಷಣದ ವೇಳೆ ತನ್ನ ಪತಿ ಡೌಗ್ಲಾಸ್ ಎಂಹಾಫ್, ಯುಎಸ್ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಪ್ರಮುಖರಿಗೆ ಧನ್ಯವಾದ ಸಲ್ಲಿಸಿದ್ದಾರೆ.