ವಾಷಿಂಗ್ಟನ್: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಕೆನಡಾ ಆರೋಪ ಕಳವಳಕಾರಿಯಾಗಿದ್ದು, ಈ ವಿಷಯದ ಕುರಿತು ಕೆನಡಾವನ್ನು ಸಂಪರ್ಕಿಸುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಬುಧವಾರ ಹೇಳಿದೆ.
ಈ ಕುರಿತು ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ರಾಜ್ಯ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್, “ಕೆನಡಾ ಸರಕಾರ ಮಾಡಿರುವ ಆರೋಪ ಕಳವಳಕಾರಿಯಾಗಿದ್ದು, ಈ ಆರೋಪಗಳ ಕುರಿತು ಕೆನಡಾ ಸರಕಾರವನ್ನು ಸಂಪರ್ಕಿಸುವುದನ್ನು ನಾವು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತವಾದಿಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗಳ ಹಿಂದೆ ಅಮಿತ್ ಶಾ ಕೈವಾಡವಿದೆ ಎಂಬ ವಾಷಿಂಗ್ಟನ್ ಪೋಸ್ಟ್ ವರದಿಗಳನ್ನು ಕೆನಡಾದ ರಾಷ್ಟ್ರೀಯ ಭದ್ರತಾ ಮತ್ತು ಗುಪ್ತಚರ ಸಲಹೆಗಾರ ನಥಾಲಿ ಡ್ರೌಯಿನ್, ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಹಾಗೂ ಕೆನಡಾ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರು ದೃಢಪಡಿಸಿದ್ದಾರೆ.
ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮಾರಿಸನ್, “ನಾನೇ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಅಮಿತ್ ಶಾ ಹೆಸರನ್ನು ದೃಢಪಡಿಸಿದ್ದೆ. ನನಗೆ ಕರೆ ಮಾಡಿದ್ದ ಪತ್ರಕರ್ತರು, ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗಳ ಹಿಂದೆ ಕೈವಾಡ ನಡೆಸಿರುವ ವ್ಯಕ್ತಿ ಅಮಿತ್ ಶಾರೇ ಎಂದು ಪ್ರಶ್ನಿಸಿದರು. ನಾನು ಹೌದೆಂದು ದೃಢಪಡಿಸಿದೆ” ಎಂದು ಹೇಳಿದ್ದಾರೆ.