ವಿಶ್ವಸಂಸ್ಥೆ : ಹಿಜ್ಬುಲ್ಲಾ ವಿರುದ್ಧದ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ ಲೆಬನಾನ್ನಲ್ಲಿ ನಿಯೋಜನೆಗೊಂಡಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗದ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಭಾರತ ಸಹಿತ ಹಲವು ದೇಶಗಳು ಬಲವಾಗಿ ಖಂಡಿಸಿವೆ.
ಇಂತಹ ಕೃತ್ಯಗಳು ತಕ್ಷಣವೇ ನಿಲ್ಲಬೇಕು ಮತ್ತು ಇದರ ಬಗ್ಗೆ ಸೂಕ್ತವಾಗಿ ತನಿಖೆ ನಡೆಯಬೇಕು ಎಂದು ಲೆಬನಾನ್ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಯೋಧರನ್ನು ಕಳುಹಿಸಿರುವ ದೇಶಗಳು ಆಗ್ರಹಿಸಿವೆ.
ಭಾರತ, ಇಂಡೊನೇಶ್ಯಾ, ಇಟಲಿ, ಘಾನಾ, ನೇಪಾಳ, ಮಲೇಶ್ಯಾ, ಸ್ಪೇನ್, ಫ್ರಾನ್ಸ್ ದೇಶಗಳು ನೂರಾರು ಯೋಧರನ್ನು ಶಾಂತಿಪಾಲನಾ ಪಡೆಗೆ (ಯುಎನ್ಐಎಫ್ಐಎಲ್) ರವಾನಿಸಿವೆ. ದಕ್ಷಿಣ ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಮೇಲೆ ಇಸ್ರೇಲ್ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಕನಿಷ್ಠ 5 ಶಾಂತಿಪಾಲಕರು ಗಾಯಗೊಂಡಿದ್ದರು.
ಇಸ್ರೇಲ್ ಮಿಲಿಟರಿಯು ಶಾಂತಿಪಾಲನಾ ಪಡೆಯ ಯೋಧರ ಮೇಲೆ ಉದ್ದೇಶಪೂರ್ವಕ ಗುಂಡಿನ ದಾಳಿ ನಡೆಸಿದ್ದು ಈ ಕೃತ್ಯವು ಲೆಬನಾನ್, ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗೆ ತೊಡಕಾಗಲಿದೆ ಎಂದು ಯುಎನ್ಐಎಫ್ಐಎಲ್ ಆರೋಪಿಸಿದೆ.
ಶನಿವಾರ ಮೂರು ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿರುವುದಾಗಿ ಲೆಬನಾನ್ ನ ಆರೋಗ್ಯ ಇಲಾಖೆ ಹೇಳಿದೆ.
ಶಾಂತಿಪಾಲನಾ ಪಡೆಗೆ ಯೋಧರನ್ನು ಕಳುಹಿಸಿರುವ 40 ದೇಶಗಳು `ಯುಎನ್ಐಎಫ್ಐಎಲ್ ನ ಉದ್ದೇಶ ಮತ್ತು ಕಾರ್ಯಾಚರಣೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿವೆ. ದಕ್ಷಿಣ ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ತರುವ ಪ್ರಧಾನ ಉದ್ದೇಶ ಹೊಂದಿರುವ ಶಾಂತಿಪಾಲನಾ ಪಡೆಯ ಉಪಸ್ಥಿತಿಯನ್ನು ಗೌರವಿಸಬೇಕು. ಮತ್ತು ಶಾಂತಿಪಾಲನಾ ಪಡೆಯ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಎಲ್ಲಾ ಸಮಯದಲ್ಲೂ ಖಾತರಿ ಪಡಿಸಲು ಎಲ್ಲಾ ಪಕ್ಷಗಳೂ ಬದ್ಧವಾಗಬೇಕು ಎಂದು 40 ದೇಶಗಳು ಸಹಿ ಹಾಕಿರುವ ಜಂಟಿ ಹೇಳಿಕೆ ಒತ್ತಾಯಿಸಿದೆ.
2006ರಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆದ 33 ದಿನಗಳ ಯುದ್ಧವನ್ನು ಅಂತ್ಯಗೊಳಿಸಿದ ಕದನ ವಿರಾಮ ಒಪ್ಪಂದದ ಮೇಲುಸ್ತುವಾರಿ ವಹಿಸುವ ಹೊಣೆ ಹೊತ್ತಿರುವ ಯುಎನ್ಐಎಫ್ಐಎಲ್ ಸುಮಾರು 9,500 ಪಡೆಗಳನ್ನು ಹೊಂದಿದೆ. ದಕ್ಷಿಣ ಲೆಬನಾನ್ ನಲ್ಲಿ ಲೆಬನಾನ್ನ ಸೇನೆ ಮತ್ತು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ಮಾತ್ರ ನಿಯೋಜಿಸಬೇಕು ಎಂಬ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಯುಎನ್ಐಎಫ್ಐಎಲ್ನ ಪಾತ್ರಕ್ಕೆ ಬಲ ತುಂಬಿದೆ.
ಶಾಂತಿಪಾಲನಾ ಪಡೆಯ ಮೇಲಿನ ದಾಳಿಯು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಖಂಡಿಸಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಪ್ರಧಾನ ಕಚೇರಿಯಿರುವ ಲೆಬನಾನ್‌ನಲ್ಲಿ ನಗರ ನಖುರಾದಲ್ಲಿ ಹಾಗೂ ಇತರೆಡೆ ಶಾಂತಿಪಾಲನಾ ಯೋಧರ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ. ನಖುರಾದಲ್ಲಿನ ವೀಕ್ಷಣಾ ಗೋಪುರದಲ್ಲಿದ್ದ ಇಬ್ಬರು ಇಂಡೋನೇಶ್ಯಾದ ಯೋಧರು ಇಸ್ರೇಲ್ ಟ್ಯಾಂಕ್ ನ ಗುಂಡಿನ ದಾಳಿಯಲ್ಲಿ ಕೆಳಗೆ ಬಿದ್ದಿದ್ದಾರೆ. ಮರುದಿನ ಇದೇ ಸ್ಥಳದಲ್ಲಿ ನಡೆದ ದಾಳಿಯಲ್ಲಿ ಶ್ರೀಲಂಕಾದ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಯುಎನ್ಐಎಫ್ಐಎಲ್ ಹೇಳಿದೆ. `ನಖುರಾದಲ್ಲಿ ಶಾಂತಿಪಾಲನಾ ಪಡೆಯ ಕೇಂದ್ರ ಕಚೇರಿಗೆ ಬೆದರಿಕೆ ಎದುರಾಗಿರುವುದನ್ನು ಗಮನಿಸಿ ತನ್ನ ಪಡೆ ಪ್ರತಿಕ್ರಿಯಿಸಿದೆ ಎಂದು ಇಸ್ರೇಲ್ ಹೇಳಿದೆ.
► ಭಾರತದ 900 ಯೋಧರು
ಇಸ್ರೇಲ್ ದಾಳಿಯಲ್ಲಿ ವಿಶ್ವಸಂಸ್ಥೆ ಶಾಂತಿ ಪಾಲನಾ ಯೋಧರು ಗಾಯಗೊಂಡಿರುವ ಬಗ್ಗೆ ಮತ್ತು ದಕ್ಷಿಣ ಲೆಬನಾನ್ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.
ವಿಶ್ವಸಂಸ್ಥೆ ಏಜೆನ್ಸಿಯ ಆವರಣವನ್ನು ಉಲ್ಲಂಘಿಸಬಾರದು ಎಂಬ ನಿಯಮಕ್ಕೆ ಎಲ್ಲರೂ ಬದ್ಧವಾಗಿರಬೇಕು ಮತ್ತು ಅದನ್ನು ಗೌರವಿಸಬೇಕು. ವಿಶ್ವಸಂಸ್ಥೆ ಶಾಂತಿಪಾಲಕರ ಸುರಕ್ಷತೆಯನ್ನು ಖಾತರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.
`ಯುನೈಟೆಡ್ ನೇಷನ್ಸ್ ಇಂಟರಿಮ್ ಫೋರ್ಸ್ ಇನ್ ಸೌತ್ ಲೆಬನಾನ್’ (ಯುಎನ್ಐಎಫ್ಐಎಲ್)ಗೆ ಭಾರತ 900ಕ್ಕೂ ಅಧಿಕ ಯೋಧರನ್ನು ಕಳುಹಿಸಿದೆ.