ಟೆಹ್ರಾನ್ :� ಇರಾನ್‌ನ ಖುದ್ಸ್ ಫೋರ್ಸ್‌ನ ಕಮಾಂಡರ್ ಇಸ್ಮಾಯಿಲ್ ಖಾನಿ ಇತ್ತೀಚಿಗೆ ಲೆಬನಾನ್‌ಗೆ ಪ್ರಯಾಣಿಸಿದ ನಂತರ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಾಪತ್ತೆ ಈಗ ಬೇರೆ ಬೇರೆ ವದಂತಿಗಳಿಗೆ ಕಾರಣವಾಗಿದೆ.
ಇದರಿಂದಾಗಿ ಇರಾನ್‌ನ ಅತ್ಯುನ್ನತ ಮಿಲಿಟರಿ ಕಮಾಂಡರ್ ಇಸ್ರೇಲ್ ನ ಮೋಸಾದ್ ಏಜೆಂಟೇ ಎಂಬ ಪ್ರಶ್ನೆಯೂ ಎದ್ದಿದೆ. ಅವರ ನಾಪತ್ತೆ, ಅವರು ಇಸ್ರೇಲ್ ಗುಪ್ತಚರ ಸಂಸ್ಥೆ ಮೋಸಾದ್‌ನ ಏಜೆಂಟ್ ಆಗಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ. ಅವರನ್ನು ಬಂಧಿಸಿ ಇರಾನ್ ಸರಕಾರ ವಿಚಾರಣೆ ನಡೆಸುತ್ತಿದೆ ಎಂದೂ ಹೇಳಲಾಗುತ್ತಿದೆ.
ಇಸ್ರೇಲ್‌ನ ದಾಳಿಯಲ್ಲಿ ಕಳೆದ ತಿಂಗಳು ಹಿಜ್ಬುಲ್ಲಾ ನಾಯಕರಾದ ಸಯ್ಯದ್ ಹಸನ್ ನಸ್ರಲ್ಲಾಹ್ ಮೃತಪಟ್ಟಿದ್ದರು. ಈ ದಾಳಿಯ ನಂತರ ಖುದ್ಸ್ ಫೋರ್ಸ್‌ನ ಕಮಾಂಡರ್ ಇಸ್ಮಾಯಿಲ್ ಖಾನಿ ಲೆಬನಾನ್‌ಗೆ ಪ್ರಯಾಣಿಸಿರುವುದಾಗಿ ವರದಿಯಾಗಿತ್ತು. ಇಸ್ಮಾಯಿಲ್ ಖಾನಿ ಕಾಣೆಯಾಗಿದ್ದು ಇತ್ತೀಚಿನ ಇರಾನ್ ಹಾಗೂ ಲೆಬನಾನ್ ವಿರುದ್ಧದ ಇಸ್ರೇಲ್ ಯಶಸ್ವಿ ಕಾರ್ಯಾಚರಣೆಗಳ ಹಿಂದಿರುವ ಸಂಚುಕೋರ ಇವರೇ ಎಂಬ ದೊಡ್ಡ ಶಂಕೆ ವ್ಯಕ್ತವಾಗಿದೆ.
ಒಬ್ಬ ಅಧಿಕಾರಿಯ ಪ್ರಕಾರ, ಬೈರುತ್‍ನ ದಕ್ಷಿಣದ ಉಪನಗರ ದಹಿಯೆಹ್‍ನಲ್ಲಿ ಹಿಜ್ಬುಲ್ಲಾದ ಹಿರಿಯ ಮುಖಂಡ ಹಾಶೆಮ್ ಸಫಿದ್ದೀನ್‍ರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯ ಸಂದರ್ಭ ಖಾನಿ ಅವರೂ ಆ ನಗರದಲ್ಲಿದ್ದರು. ಆದರೆ ದಾಳಿ ನಡೆದ ಸಂದರ್ಭ ಸಫಿದ್ದೀನ್ ಜತೆ ಖಾನಿ ಸಭೆ ನಡೆಸುತ್ತಿರಲಿಲ್ಲ. ಈಗ ಖಾನಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು ಇಸ್ರೇಲ್‍ನ ಗೂಢಚಾರ ಎಂಬ ಶಂಕೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಸನ್’ ವರದಿ ಮಾಡಿದೆ.
►ಇಸ್ಮಾಯಿಲ್ ಖಾನಿ ಯಾರು? ಇರಾನಿನಲ್ಲಿ ಇವರ ಪ್ರಭಾವವೆಷ್ಟು?
2020ರಲ್ಲಿ ಅಮೆರಿಕಾವು ಖುದ್ಸ್ ಫೋರ್ಸ್ ನ ಮುಖ್ಯಸ್ಥರಾಗಿದ್ದ ಖಾಸಿಂ ಸುಲೇಮಾನಿಯವರನ್ನು ಹತ್ಯೆ ಮಾಡಿತ್ತು. ಸುಲೇಮಾನಿ ಹತ್ಯೆಯ ನಂತರ ಖುದ್ಸ್ ಫೋರ್ಸ್ ನ ಮುಖ್ಯಸ್ಥರಾಗಿ ಇಸ್ಮಾಯಿಲ್ ಖಾನಿ ನೇಮಕಗೊಂಡಿದ್ದರು. ಮಧ್ಯಪ್ರಾಚ್ಯದಲ್ಲಿ ಮತ್ತು ಜಾಗತಿಕವಾಗಿರುವ ಇರಾನಿನ ಪ್ಯಾರಾಮಿಲಿಟರಿ ಮಿತ್ರ ರಾಷ್ಟ್ರಗಳನ್ನು ನಿಭಾಯಿಸುವುದು ಇಸ್ಮಾಯಿಲ್ ಖಾನಿಯವರ ಪ್ರಮುಖ ಜವಾಬ್ದಾರಿ.
ಮೃತಪಟ್ಟ ಕಮಾಂಡರ್ ಖಾಸಿಮ್ ಸುಲೈಮಾನಿ ಬಹಳ ಗೌರವಾನ್ವಿತರಾಗಿದ್ದು ಇರಾನ್‌ನ ಪ್ರಾದೇಶಿಕ ಮಿತ್ರರೊಂದಿಗೆ ಬಲವಾದ ಸಂಬಂಧ ಹೊಂದಿದ್ದರು. ಆದರೆ ಇಸ್ಮಾಯಿಲ್ ಖಾನಿ ಅವರು ಸುಲೇಮಾನಿ ಅವರಷ್ಟು ಪ್ರಭಾವ ಅಥವಾ ಅಧಿಕಾರವನ್ನು ಹೊಂದಿರಲಿಲ್ಲ ಎಂದು ಸೇನಾ ವಿಶ್ಲೇಷಕರು ಮತ್ತು ಮಾಜಿ ಹಾಗೂ ಹಾಲಿ ಕಮಾಂಡರ್ ಗಳ ಕಾರ್ಯವೈಖರಿ ನೋಡಿದ ತಜ್ಞರು ಹೇಳುತ್ತಾರೆ.
ಇಸ್ಮಾಯಿಲ್ ಖಾನಿ ನಾಯಕತ್ವದಲ್ಲಿ, ಹಿಜ್ಬುಲ್ಲಾ ಮತ್ತು ಇರಾಖ್ ಶಸ್ತ್ರಾಸ್ತ್ರ ಪಡೆಗಳು ಹಾಗೂ ಇರಾನಿನ ಪ್ರತಿನಿಧಿಗಳು ಇಸ್ರೇಲ್ ಪಡೆಗಳಿಂದ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇರಾನ್‌ನ ಮಶ್‌ಹದ್‌ನಲ್ಲಿ ಜನಿಸಿದ ಇಸ್ಮಾಯಿಲ್ ಖಾನಿ ಇರಾನಿನ ಸೇನೆ ರೆವಲ್ಯೂಶನರಿ ಗಾರ್ಡ್ಸ್‌ನಲ್ಲಿ ತುಂಬಾ ಸಮಯದಿಂದ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಇರಾನ್-ಇರಾಖ್ ಯುದ್ಧದಲ್ಲಿ ಭಾಗವಹಿಸಿದ್ದಾರೆ.
1997ರಲ್ಲಿ ಅವರು ಖುದ್ಸ್ ಫೋರ್ಸ್‌ನ ಉಪ ಕಮಾಂಡರ್ ಆಗಿದ್ದರು. ಅವರು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಆದರೆ ಖಾಸಿಂ ಸುಲೈಮಾನಿಯವರಂತೆ ಅರೇಬಿಕ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಲಿಲ್ಲ.
ಖಾಸಿಂ ಸುಲೈಮಾನಿಯವರಂತೆ ಸಮರಭೂಮಿಯಲ್ಲಿ ಹೆಚ್ಚು ಕಾಣಸಿಗದ ಇಸ್ಮಾಯಿಲ್ ಖಾನಿ, ಸಭೆಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಕಡಿಮೆಯೇ ಹೊರಗೆ ಕಾಣಿಸಿಕೊಳ್ಳುತ್ತಾ ಬಂದಿದ್ದರು.
ಇದೇ ವೇಳೆ ಇರಾನ್‌ನ ಪರಮಾಣು ಸೌಲಭ್ಯಗಳು ಸೇರಿದಂತೆ ಎಲ್ಲಾ ಮೂರು ಸರ್ಕಾರಿ ಶಾಖೆಗಳ ಮೇಲೆ ಭಾರೀ ಸೈಬರ್ ದಾಳಿ ನಡೆದಿದೆ. ಇರಾನ್‌ನ ಸುಪ್ರೀಂ ಕೌನ್ಸಿಲ್ ಆಫ್ ಸೈಬರ್‌ಸ್ಪೇಸ್‌ನ ಮಾಜಿ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಇರಾನ್ ಇಂಟರ್‌ನ್ಯಾಶನಲ್ ಈ ಬಗ್ಗೆ ವರದಿ ಮಾಡಿದೆ.
ಈ ಸೈಬರ್ ದಾಳಿಯ ಹಿಂದೆ ಇಸ್ರೇಲ್ ಇದೆಯೇ ಎಂಬುದು ಅಸ್ಪಷ್ಟವಾಗಿದೆ, ಆದರೆ ಇರಾನಿನ ಅಕ್ಟೋಬರ್ 1 ರ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ನ ಪರಮಾಣು ಮತ್ತು ತೈಲ ಘಟಕಗಳನ್ನು ಹೊಡೆದು ಹಾಕುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿತ್ತು. ಹಿಜ್ಬುಲ್ಲಾಹ್ ಮುಖ್ಯಸ್ಥರಾದ ಹಸನ್ ನಸ್ರಲ್ಲಾ ಹತ್ಯೆಗೆ ಪ್ರತಿಕಾರವಾಗಿ ಇರಾನ್ ಇಸ್ರೇಲ್ ಮೇಲೆ ಬಾಲಿಸ್ಟಿಕ್ ಮಿಸೈಲ್ ಸೇರಿದಂತೆ 180 ಕ್ಕೂ ಹೆಚ್ಚು ಮಿಸೈಲ್ ಗಳ ದಾಳಿ ನಡೆಸಿತ್ತು. ಅಗತ್ಯ ಬಂದಲ್ಲಿ ದಾಳಿ ಮುಂದುವರಿಸುವುದಾಗಿ ಇರಾನ್ ಸುಪ್ರೀಂ ಲೀಡರ್ ಆಯತುಲ್ಲಾಹ್ ಖಾಮಿನೈ ಎಚ್ಚರಿಕೆ ನೀಡಿದ್ದರು. ಆದರೂ ಇಸ್ರೇಲ್ ಲೆಬನಾನ್ ಮತ್ತು ಗಾಝಾ ಮೇಲಿನ ತನ್ನ ಅಮಾನುಷ ದಾಳಿಗಳನ್ನು ಮುಂದುವರಿಸಿದೆ.