EBM News Kannada
Leading News Portal in Kannada

ಇನ್ನಷ್ಟು ವ್ಯಾಪಾರ ನಿರ್ಬಂಧ | ತೈವಾನ್‍ಗೆ ಚೀನಾ ಎಚ್ಚರಿಕೆ | More trade restriction

0


ಬೀಜಿಂಗ್ : ತೈವಾನ್ ವಿರುದ್ಧ ಇನ್ನಷ್ಟು ವ್ಯಾಪಾರ ನಿರ್ಬಂಧ ಜಾರಿಗೊಳಿಸುವ ಪ್ರಸ್ತಾವನೆಯ ಬಗ್ಗೆ ಅಧ್ಯಯನ ನಡೆಯುತ್ತಿದ್ದು ಶೀಘ್ರ ನಿರ್ಧರಿಸಲಾಗುವುದು ಎಂದು ಚೀನಾದ ವಾಣಿಜ್ಯ ಸಚಿವಾಲಯ ಶನಿವಾರ ಹೇಳಿದೆ.

ತೈವಾನ್‍ನ ಆಡಳಿತ ಪಕ್ಷವಾದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಡಿಪಿಪಿ)ಯು ಮೇಲಿನ `ವ್ಯಾಪಾರ ನಿರ್ಬಂಧ’ ತೆರವುಗೊಳಿಸುವುದಕ್ಕೆ ಪೂರಕವಾದ ಯಾವುದೇ ಪ್ರಾಯೋಗಿಕ ಕ್ರಮಗಳನ್ನು ಕೈಗೊಂಡಿಲ್ಲ. ಪ್ರಸ್ತುತ ತೈವಾನ್‍ನಿಂದ ವ್ಯಾಪಾರ ಅಡೆತಡೆಗಳ ತನಿಖೆಯ ತೀರ್ಮಾನಗಳ ಆಧಾರದ ಮೇಲೆ ಸಂಬಂಧಿತ ಇಲಾಖೆಗಳು ಹೆಚ್ಚಿನ ಕ್ರಮಗಳನ್ನು ಅಧ್ಯಯನ ಮಾಡುತ್ತಿವೆ ಎಂದು ವಾಣಿಜ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಗುರುವಾರ ರಾಷ್ಟ್ರೀಯ ದಿನಾಚರಣೆ ಸಂದರ್ಭ ಮುಖ್ಯ ಭಾಷಣ ಮಾಡಿದ್ದ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ` ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ವು ತೈವಾನ್ ಅನ್ನು ಪ್ರತಿನಿಧಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ. ಆದರೆ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಚೀನಾದೊಂದಿಗೆ ಕೆಲಸ ಮಾಡಲು ತೈವಾನ್ ಸಿದ್ಧವಿದೆ’ ಎಂದಿದ್ದರು. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಿರುವ ತೈವಾನ್ ತನ್ನ ಭೂಪ್ರದೇಶ ಎಂದು ಪ್ರತಿಪಾದಿಸುತ್ತಿರುವ ಚೀನಾ, ಲಾಯ್ ಚೆಂಗ್-ಟೆಯನ್ನು ಪ್ರತ್ಯೇಕತಾವಾದಿ ಎಂದು ಹೇಳುತ್ತಿದೆ. ಲಾಯ್ ಅವರ ಭಾಷಣವು ಪ್ರತ್ಯೇಕತಾವಾದಿ ಚಿಂತನೆಗಳನ್ನು ಉತ್ತೇಜಿಸುತ್ತದೆ ಮತ್ತು ಘರ್ಷಣೆಗಳನ್ನು ಪ್ರಚೋದಿಸುತ್ತದೆ ಎಂದು ತೈವಾನ್ ವ್ಯವಹಾರಕ್ಕೆ ಸಂಬಂಧಿಸಿದ ಚೀನಾದ ಇಲಾಖೆ ಹೇಳಿದ್ದು ಟಿಡಿಪಿ ಮುಖಂಡರು ತೈವಾನ್ ಸ್ವಾತಂತ್ರ್ಯದ ಬಗ್ಗೆ ತಳೆದಿರುವ ಮೊಂಡುತನದ ನಿಲುವು ವ್ಯಾಪಾರ ವಿವಾದದ ಹಿಂದಿನ ಮೂಲಭೂತ ಕಾರಣವಾಗಿದೆ ಎಂದು ಟೀಕಿಸಿದೆ.

ತೈವಾನ್ ಪೂರಕ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ವ್ಯಾಪಾರ ಒಪ್ಪಂದದ ಅಡಿಯಲ್ಲಿ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸುವುದಾಗಿ ಚೀನಾದ ವಿತ್ತ ಸಚಿವಾಲಯ ಘೋಷಿಸಿದ ಬಳಿಕ ಮೇ ತಿಂಗಳಲ್ಲಿ, ಚೀನಾವು ತೈವಾನ್‍ನಿಂದ ಆಮದು ಮಾಡಿಕೊಳ್ಳುವ 134 ವಸ್ತುಗಳ ಮೇಲೆ ಸುಂಕವನ್ನು ಮರುಸ್ಥಾಪಿಸಿತು. ಚೀನಾ ಮತ್ತು ತೈವಾನ್ ನಡುವೆ 2010ರಲ್ಲಿ `ದಿ ಕ್ರಾಸ್ ಸ್ಟ್ರೈಟ್ ಇಕನಾಮಿಕ್ ಕೋಆಪರೇಷನ್ ಫ್ರೇಮ್‍ವರ್ಕ್ ಎಗ್ರಿಮೆಂಟ್’ಗೆ ಸಹಿಹಾಕಲಾಗಿದೆ. ಆದರೆ ಈ ಒಪ್ಪಂದದೊಳಗಿರುವ ಕೆಲವು ಆದ್ಯತೆಯ ನಿಯಮಗಳನ್ನು ಕೊನೆಗೊಳಿಸುವ ಮೂಲಕ ಚೀನಾವು ಲಾಯ್ ಮೇಲೆ ಒತ್ತಡ ವಿಧಿಸುವ ಸಾಧ್ಯತೆಯಿದೆ ಎಂದು ತೈವಾನ್ ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

Leave A Reply

Your email address will not be published.