ಭಾರತವು ನಗುನಗುತ್ತಲೇ ವಿದೇಶಿ ವಸ್ತುಗಳ ಮೇಲೆ ಅತಿ ಹೆಚ್ಚು ಸುಂಕ ವಿಧಿಸುತ್ತಿದೆ, ನಾನು ಮತ್ತೆ ಅಧ್ಯಕ್ಷನಾದರೆ…: ಟ್ರಂಪ್ ಹೇಳಿದ್ದೇನು?
ವಾಷಿಂಗ್ಟನ್: ಭಾರತವು ವಿದೇಶಿ ವಸ್ತುಗಳ ಮೇಲೆ ಅತಿ ಹೆಚ್ಚು ಸುಂಕವನ್ನು ನಗುನಗುತ್ತಲೇ ವಿಧಿಸುತ್ತಿದ್ದು, ಒಂದು ವೇಳೆ ನಾನೇನಾದರೂ ಅಧ್ಯಕ್ಷನಾಗಿ ಚುನಾಯಿತನಾದರೆ ಭಾರತ ವಿಧಿಸುವ ಸುಂಕದ ಪ್ರಮಾಣದಷ್ಟೇ ಸುಂಕವನ್ನು ಭಾರತೀಯ ವಸ್ತುಗಳಿಗೆ ವಿಧಿಸುತ್ತೇನೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಸಂಪತ್ತನ್ನು ವೃದ್ಧಿಸಲು ಪರಸ್ಪರ ತೆರಿಗೆ ವಿಧಿಸುವುದು ನನ್ನ ಯೋಜನೆಯ ಬಹು ಮುಖ್ಯ ಸಾಧನವಾಗಿದೆ. ಅಮೆರಿಕ ಸಾಮಾನ್ಯವಾಗಿ ಹೆಚ್ಚು ತೆರಿಗೆಯನ್ನು ವಿಧಿಸುವುದಿಲ್ಲ. ಆದರೆ, ಬಹಳಷ್ಟು ದೇಶಗಳು, ವಿಶೇಷವಾಗಿ ಭಾರತವು ಅಮೆರಿಕ ವಸ್ತುಗಳ ಮೇಲೆ ಭಾರಿ ಪ್ರಮಾಣದ ಸುಂಕವನ್ನು ವಿಧಿಸುತ್ತದೆ ಎಂದು ಅವರು ಹೇಳಿದ್ದಾರೆ.
“ನಾವು ನಿಜಕ್ಕೂ ಸುಂಕ ವಿಧಿಸುವುದಿಲ್ಲ. ಆದರೆ, ಚೀನಾ ಶೇ. 200ರಷ್ಟು ಸುಂಕ ವಿಧಿಸುತ್ತದೆ. ಬ್ರೆಝಿಲ್ ಅದಕ್ಕಿಂತ ಹೆಚ್ಚು ಸುಂಕ ವಿಧಿಸುತ್ತದೆ. ಅತಿ ಹೆಚ್ಚು ಸುಂಕ ವಿಧಿಸುವ ದೇಶಗಳ ಪೈಕಿ ಭಾರತ ಮೊದಲನೆಯದಾಗಿದೆ” ಎಂದು ಮೋದಿಯನ್ನು ಶ್ಲಾಘಿಸುತ್ತಲೇ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಭಾರತವು ಭಾರಿ ಪ್ರಮಾಣದ ಸುಂಕ ವಿಧಿಸುತ್ತದೆ. ನಮಗೆ ಭಾರತದೊಂದಿಗೆ ಅತ್ಯುತ್ತಮ ಬಾಂಧವ್ಯವಿದೆ. ನಾನು ಕೂಡಾ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ವಿಶೇಷವಾಗಿ, ಭಾರತದ ನಾಯಕ ಮೋದಿಯೊಂದಿಗೆ. ಅವರೊಬ್ಬ ಅದ್ಭುತ ನಾಯಕ. ಅದ್ಭುತ ವ್ಯಕ್ತಿ. ಅವರು ಭಾರತ ಮತ್ತು ಅಮೆರಿಕವನ್ನು ಹತ್ತಿರಕ್ಕೆ ತಂದರು. ಅವರು ಅದ್ಭುತ ಕೆಲಸ ಮಾಡಿದ್ದಾರೆ” ಎಂದು ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.