ಬೈರುತ್: ಲೆಬನಾನ್ ನ ಸೆಂಟ್ರಲ್ ಬೈರುತ್ ಮೇಲೆ ಇಸ್ರೇಲ್ ವಾಯು ದಾಳಿಯನ್ನು ನಡೆಸಿದ್ದು, ಕನಿಷ್ಟ 22 ಮಂದಿ ಮೃತಪಟ್ಟು 117 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಲೆಬನಾನ್ ನ ಆರೋಗ್ಯ ಸಚಿವಾಲಯ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಗುರುವಾರ ಸಂಜೆ ಬೈರುತ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಗೆ 22 ಜನರು ಸಾವನ್ನಪ್ಪಿದ್ದಾರೆ ಮತ್ತು 117 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ವೈಮಾನಿಕ ದಾಳಿಯು ರಾಸ್ ಅಲ್-ನಬಾ ಪ್ರದೇಶ ಮತ್ತು ಬುರ್ಜ್ ಅಬಿ ಹೈದರ್ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆದಿದೆ.
ಇಸ್ರೇಲ್ ದಾಳಿಗೆ ಎರಡು ಕಟ್ಟಡಗಳು ದಟ್ಟ ಹೊಗೆಯಿಂದ ಆವರಿಸಿರುವುದು AFP ಲೈವ್ ಟಿವಿಯ ವಿಡಿಯೋ ತುಣುಕುಗಳು ತೋರಿಸಿದೆ. ಆದರೆ ಇಸ್ರೇಲ್ ಈ ದಾಳಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಕೆಲ ವಾರಗಳಿಂದ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸುತ್ತಿದ್ದು , ಗಾಝಾದಂತೆ ಲೆಬನಾನ್ ನಲ್ಲಿ ಕೂಡ ನಾಗರಿಕರ ಸಾವುಗಳು ಮುಂದುವರಿದಿದೆ.