ದೋಹಾ : ಇರಾನ್ ವಿರುದ್ಧ ಇಸ್ರೇಲ್ ಮುಂದಿನ ದಿನಗಳಲ್ಲಿ ಯಾವುದೇ ಸೇನಾಕ್ರಮಗಳನ್ನು ಕೈಗೊಂಡಲ್ಲಿ, ಟೆಹರಾನ್ ಅದಕ್ಕೆ ಪ್ರಬಲವಾದ ಪ್ರತಿಕ್ರಿಯೆ ನೀಡಲಿದೆ ಎಂದು ಇರಾನಿನ ಅಧ್ಯಕ್ಷ ಮಸೂದ್ ಪೆಝೆಶಿಕಿಯಾನ್ ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್, ಇಸ್ರೇಲ್ ಜೊತೆ ಯುದ್ದವನ್ನು ಮಾಡಲು ಬಯಸುತ್ತಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಕತರ್ ರಾಜಧಾನಿ ದೋಹಾದಲ್ಲಿ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ತಾನಿ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ‘‘ಇಸ್ರೇಲ್ ಜೊತೆ ನಾವು ಯುದ್ಧ ಮಾಡುವ ಹಂಬಲವನ್ನು ಹೊಂದಿಲ್ಲ. ಅವರು ನಮಗೆ ಶಾಂತಿಯ ವಾಗ್ದಾನ ನೀಡಿದ್ದರು. ಆದರೆ ಇಸ್ರೇಲ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹರಾನ್‌ಗೆ ಆಗಮಿಸಿದ್ದ ನಮ್ಮ ಅತಿಥಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದರು. ನಾವು ಶಾಂತಿಯನ್ನು ಸ್ಥಾಪಿಸಲು ಬಯಸುತ್ತಿದ್ದೇವೆ. ಒಂದು ವೇಳೆ ಇಸ್ರೇಲ್ ಸಮ್ಮತಿಸದೆ ಇದ್ದಲ್ಲಿ, ಶಾಂತಿ ಸ್ಥಾಪನೆ ಅಸಾಧ್ಯ ’’ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೋರಾಟಗಾರರ ಜೊತೆಗಿನ ಸಂಘರ್ಷದಲ್ಲಿ 8 ಮಂದಿ ಇಸ್ರೇಲಿ ಯೋಧರು ಸಾವನ್ನಪ್ಪಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು, ಇಸ್ರೇಲ್ ಅತ್ಯಂತ ಕಠಿಣವಾದ ಯುದ್ಧದ ಮಧ್ಯದಲ್ಲಿದೆ. ನಮ್ಮನ್ನು ನಾಶಪಡಿಸಲು ಬಯಸುತ್ತಿರುವ ಇರಾನ್‌ನ ದುಷ್ಟದ ವಿರುದ್ಧ ನಾವು ಕಠಿಣವಾದ ಸಮರವನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.