ಕಠ್ಮಂಡು : ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತದಿಂದ ಇಂದಿಗೆ ಮೃತಪಟ್ಟವರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಕಾಣೆಯಾಗಿರುವವರ ಸಂಖ್ಯೆ 28ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಪ್ರಾರಂಭಗೊಂಡ ಪ್ರಾಕೃತಿಕ ವಿಕೋಪ ಪರಿಸ್ಥಿತಿಯು ರವಿವಾರದ ವೇಳೆಗೆ ಹಲವಾರು ಪ್ರಾಂತ್ಯಗಳಲ್ಲಿ ವ್ಯಾಪಕ ಪ್ರಮಾಣದ ಹಾನಿಯನ್ನುಂಟು ಮಾಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ನೇಪಾಳದ ಪೂರ್ವ ಮತ್ತು ಕೇಂದ್ರ ಭಾಗದ ಭಾರಿ ಪ್ರಮಾಣವು ಶುಕ್ರವಾರದಿಂದ ಪ್ರವಾಹದಲ್ಲಿ ಮುಳುಗಿದೆ.
ಆದರೆ, ರವಿವಾರದಿಂದ ಹವಾಮಾನ ಸುಧಾರಿಸಿದ್ದು, ಪ್ರಕೃತಿ ವಿಕೋಪ ಪೀಡಿತ ಜನರಿಗೆ ಕೊಂಚ ನಿರಾಳವನ್ನುಂಟು ಮಾಡಿದೆ.
ಮಂಗಳವಾರ ಬೆಳಗ್ಗೆಯ ವೇಳೆಗೆ ನೇಪಾಳದ ಕಠ್ಮಂಡು ಮತ್ತು ಇನ್ನಿತರ ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಪ್ರಾಕೃತಿಕ ವಿಕೋಪ ಸಂಬಂಧಿತ ಘಟನೆಗಳಿಂದ 28 ಮಂದಿ ಕಾಣೆಯಾಗಿದ್ದು, 143 ಮಂದಿ ಗಾಯಾಳುಗಳಾಗಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ರಿಷಿರಾಮ್ ತಿವಾರಿ ತಿಳಿಸಿದ್ದಾರೆ.
ಗುರುವಾರದಿಂದ ಶನಿವಾರದವರೆಗೆ ಸುರಿದ ಭಾರಿ ಪ್ರಮಾಣದ ಮಳೆಯು ನೇಪಾಳವನ್ನು ತಲ್ಲಣಗೊಳಿಸಿದೆ.