ಗಾಝಾ : ಗಾಝಾದಿಂದ ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು. ಇದಕ್ಕೆ ಪ್ರತಿಯಾಗಿ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ಗಾಝಾದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕು ಎಂಬ ಹೊಸ ಪ್ರಸ್ತಾಪವನ್ನು ಇಸ್ರೇಲ್ ಮುಂದಿರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
` ಸಿನ್ವರ್, ಅವರ ಕುಟುಂಬದವರು ಹಾಗೂ ಅವರೊಂದಿಗೆ ಸೇರಲು ಬಯಸುವವರಿಗೆ ಸುರಕ್ಷಿತ ನಿರ್ಗಮನ ಅವಕಾಶ ಮಾಡಿಕೊಡಲು ನಾವು ಸಿದ್ಧವಿದ್ದೇವೆ. ಒತ್ತೆಯಾಳುಗಳು ಮರಳುವುದನ್ನು ನಾವು ಬಯಸುತ್ತೇವೆ. ಗಾಝಾವನ್ನು ಮಿಲಿಟರಿ ರಹಿತ ಪ್ರದೇಶವನ್ನಾಗಿಸಲು, ಗಾಝಾವನ್ನು ನಿರ್ವಹಿಸಲು ಹೊಸ ವ್ಯವಸ್ಥೆಯನ್ನು ನಾವು ಬಯಸುತ್ತೇವೆ ಎಂದು ಇಸ್ರೇಲ್‍ನ ಒತ್ತೆಯಾಳು ಬಿಡುಗಡೆ ಮಾತುಕತೆಯ ರಾಯಭಾರಿ ಗಾಲ್ ಹಿರ್ಷ್ ಹೇಳಿರುವುದಾಗಿ `ಬ್ಲೂಮ್‍ಬರ್ಗ್ ನ್ಯೂಸ್’ ವರದಿ ಮಾಡಿದೆ.
ಹಮಾಸ್ ಮುಖಂಡರಿಗೆ ಸುರಕ್ಷಿತ ನಿರ್ಗಮನದ ಪ್ರಸ್ತಾಪವನ್ನು ಎರಡು ದಿನದ ಹಿಂದೆ ಮುಂದಿರಿಸಲಾಗಿದ್ದು ಯಾವುದೇ ಒಪ್ಪಂದದ ಭಾಗವಾಗಿ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಲೂ ಇಸ್ರೇಲ್ ಸಿದ್ಧವಿದೆ. ಕದನ ವಿರಾಮದ ನಿರೀಕ್ಷೆಗಳು ಮಂದವಾಗಿ ಕಾಣುತ್ತಿರುವುದರಿಂದ ಹೊಸ ಪರಿಹಾರ ರೂಪಿಸುವ ಪ್ರಯತ್ನದ ಭಾಗವಾಗಿ ಈ ಪ್ರಸ್ತಾಪವನ್ನು ಮಂಡಿಸಲಾಗಿದೆ.
ಅಮೆರಿಕ, ಖತರ್ ಮತ್ತು ಈಜಿಪ್ಟ್ ಗಳು ಹೊಸ ಕದನ ವಿರಾಮ ಯೋಜನೆಯನ್ನು ರೂಪಿಸಲು ಕಾರ್ಯನಿರತವಾಗಿವೆ. ಆದರೆ ಹಮಾಸ್ ಮಾತುಕತೆಗಿಂತ ಷರತ್ತುಗಳನ್ನು ಮುಂದಿರಿಸಲು ಆಸಕ್ತವಾಗಿದೆ ಎಂದವರು ಹೇಳಿದ್ದಾರೆ.
ಆದರೆ, ವಿದೇಶದಲ್ಲಿರುವ ಕಾರ್ಯಕರ್ತರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುವ ಇತಿಹಾಸವನ್ನು ಇಸ್ರೇಲ್ ಹೊಂದಿರುವುದರಿಂದ, ಗಾಝಾದಿಂದ ಸಿನ್ವರ್ ತೆರಳಬೇಕು ಎಂಬ ಇಸ್ರೇಲ್‍ನ ಪ್ರಸ್ತಾಪವನ್ನು ಹಮಾಸ್ ಒಪ್ಪುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಜುಲೈ 31ರಂದು ಇರಾನ್ ರಾಜಧಾನಿ ಟೆಹ್ರಾನ್‍ನಲ್ಲಿ ನಡೆದ ಹಮಾಸ್ ಮುಖಂಡ ಇಸ್ಮಾಯೀಲ್ ಹಾನಿಯೆಹ್ ಹತ್ಯೆಗೆ ಇಸ್ರೇಲ್ ಹೊಣೆ ಎಂದು ಇರಾನ್ ಆರೋಪಿಸಿತ್ತು.
`ಈ ಪ್ರಸ್ತಾಪದ ಜತೆಗೇ ನಾವು `ಪ್ಲ್ಯಾನ್ ಬಿ ಮತ್ತು ಸಿ’ಯನ್ನೂ ರೂಪಿಸಿದ್ದೇವೆ. ಯಾಕೆಂದರೆ ನಮಗೆ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಮರಳಿಸಬೇಕಿದೆ. ಸಮಯ ಓಡುತ್ತಿದೆ. ಒತ್ತೆಯಾಳುಗಳಿಗೆ ಹೆಚ್ಚಿನ ಸಮಯವಿಲ್ಲ’ ಎಂದು ಹಿರ್ಷ್ ಹೇಳಿದ್ದಾರೆ.
ಆಗಸ್ಟ್ ಅಂತ್ಯದಲ್ಲಿ ಇಸ್ರೇಲ್‍ನ 6 ಒತ್ತೆಯಾಳುಗಳ ಹತ್ಯೆಗೆ ಕಾರಣರಾದವರ ವಿರುದ್ಧ `ಮ್ಯೂನಿಕ್ ರೀತಿಯ ಪ್ರತೀಕಾರ’ ಕೈಗೊಳ್ಳಲಾಗುವುದು. ಕೊಲೆಗಡುಕರು ತಮ್ಮ ಕೃತ್ಯಗಳಿಗೆ ಬೆಲೆ ತೆರಲೇಬೇಕು ಎಂದು ಗಾಲ್ ಹಿರ್ಷ್‍ರನ್ನು ಉಲ್ಲೇಖಿಸಿದ ವರದಿ ಹೇಳಿದೆ. 1972ರಲ್ಲಿ ಜರ್ಮನಿಯ ಮ್ಯೂನಿಕ್‍ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಸಂದರ್ಭ ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರು ಇಸ್ರೇಲ್‍ನ 6 ಕ್ರೀಡಾಪಟುಗಳನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ವರ್ಷಗಳ ಕಾಲ ಹತ್ಯೆಯ ಅಭಿಯಾನವನ್ನು ಇಸ್ರೇಲ್ ನಡೆಸಿತ್ತು.
ಮೇ ತಿಂಗಳಿನಲ್ಲೂ ಹಮಾಸ್ ಮುಖಂಡರಿಗೆ ಸುರಕ್ಷಿತ ನಿರ್ಗಮನದ ಬಗ್ಗೆ ಇಸ್ರೇಲ್ ಮುಖಂಡರು ಪ್ರಸ್ತಾಪಿಸಿದ್ದರು. `ಗಡೀಪಾರು ಯೋಜನೆ ನಮ್ಮ ಎದುರಿದ್ದು ಈ ಬಗ್ಗೆ ಚರ್ಚಿಸಿದ್ದೇವೆ. ಆದರೆ ನನ್ನ ಪ್ರಕಾರ ಅವರು(ಹಮಾಸ್ ಮುಖಂಡರು) ಶರಣಾಗುವುದು ಅತೀ ಮುಖ್ಯವಾಗಿದೆ. ಅವರು ಶಸ್ತ್ರಾಸ್ತ್ರ ಕೆಳಗಿಟ್ಟರೆ ಯುದ್ಧ ಅಂತ್ಯವಾಗುತ್ತದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.