ಮಾಸ್ಕೊ: ರಶ್ಯಾದಲ್ಲಿ ಸೇನೆಯ ಭದ್ರತಾ ಸಹಾಯಕನಾಗಿ ನಿಯೋಜಿತರಾಗಿದ್ದ 23 ವರ್ಷದ ಗುಜರಾತ್ ವ್ಯಕ್ತಿಯೊಬ್ಬರು ಉಕ್ರೇನ್ ನಡೆಸಿದ ವಾಯುದಾಳಿಯ ವೇಳೆ ಮೃತಪಟ್ಟಿದ್ದಾರೆ ಎಂದು ʼದಿ ಹಿಂದೂʼ ವರದಿ ಮಾಡಿದೆ.
ಹೆಮಿಲ್ ಅಶ್ವಿನ್‍ಭಾಯ್ ಮಂಗೂಕಿಯಾ ಫೆಬ್ರವರಿ 21ರಂದು ರಶ್ಯ- ಉಕ್ರೇನ್ ಗಡಿಯ ಡೊನೆಸ್ಕ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಕರ್ನಾಟಕದ ಗುಲ್ಬರ್ಗಾದ ನಿವಾಸಿ ಸಮೀರ್ ಅಹ್ಮದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಸಮೀರ್ ಕೂಡಾ ರಶ್ಯನ್ ಸೇನೆಯಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗೂಕಿಯಾ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಕಳೆದ ಒಂದು ವರ್ಷದಿಂದೀಚೆಗೆ 100 ಮಂದಿ ಭಾರತೀಯರನ್ನು ರಶ್ಯನ್ ಸೇನೆಗೆ ನಿಯೋಜಿಸಿಕೊಳ್ಳಲಾಗಿದ್ದು, ಭದ್ರತಾ ಸಹಾಯಕರಾಗಿ ನೇಮಕ ಮಾಡಿಕೊಂಡ ಕನಿಷ್ಠ ಮೂರು ಮಂದಿ ರಶ್ಯನ್ ಸೇನೆಯ ಪರವಾಗಿ ಉಕ್ರೇನ್‍ನಲ್ಲಿ ಯುದ್ಧ ಮಾಡುವಂತೆ ಬಲವಂತಪಡಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ಸುದ್ದಿ ಪ್ರಕಟವಾಗಿದೆ.
2022ರ ಫೆಬ್ರವರಿ 24ರಂದು ರಶ್ಯ, ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಇದು 2ನೇ ಮಹಾಯುದ್ಧದ ಬಳಿಕ ಯೂರೋಪ್‍ನಲ್ಲಿ ನಡೆಯುತ್ತಿರುವ ಅತ್ಯಂತ ಮಾರಕ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.