ಗಾಝಾ: ಕದನ ವಿರಾಮ ಮುಕ್ತಾಯಗೊಂಡ ಎರಡನೇ ದಿನವಾದ ಶನಿವಾರ ಗಾಝಾ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್‍ಗಳ ಸುರಿಮಳೆ ನಡೆಸಿದ್ದು ಕನಿಷ್ಟ 200 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಒಪ್ಪಂದದ ಪ್ರಕಾರ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸದ ಕಾರಣ ಕದನ ವಿರಾಮ ಮುರಿದುಬಿದ್ದಿದೆ. ಈಗ ಗಾಝಾದಲ್ಲಿ ಹಮಾಸ್‍ನ ನೆಲೆಗಳನ್ನು ಗುರಿಯಾಗಿಸಿ ತೀವ್ರ ದಾಳಿ ನಡೆಸುತ್ತಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಜೊನಾಥನ್ ಕಾರ್ನಿಕಸ್ ಹೇಳಿದ್ದಾರೆ.
ನಾವು ಗಾಝಾ ಪಟ್ಟಿಯನ್ನು ರಕ್ಷಿಸಲು ಬದ್ಧವಾಗಿದ್ದೇವೆ. ಆಕ್ರಮಣಕಾರ ಪಡೆಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಹಮಾಸ್‍ನ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ಇಸ್ರೇಲ್‍ಗೆ ಬಂಕರ್ ಬಸ್ಟರ್(ಬಂಕರ್ ಸ್ಫೋಟಿಸುವ) ಬಾಂಬ್ ಹಾಗೂ ಇತರ ಯುದ್ಧ ಸಾಮಾಗ್ರಿಗಳನ್ನು ನೀಡಿದೆ. ಅಮೆರಿಕವು 100 ಬಿಎಲ್‍ಯು-109 ಬಂಕರ್ ಬಸ್ಟರ್ ಬಾಂಬ್‍ಗಳನ್ನು ಇಸ್ರೇಲ್‍ಗೆ ಪೂರೈಸಿದ್ದು ಇವು ಸ್ಫೋಟಗೊಳ್ಳುವ ಮುನ್ನ ಕಟ್ಟಡದಂತಹ ಗಟ್ಟಿಯಾದ ರಚನೆಗಳನ್ನು ಭೇದಿಸಬಲ್ಲದು ಎಂದು ಅಮೆರಿಕದ ವಾಲ್‍ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.