EBM News Kannada
Leading News Portal in Kannada

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಕಟಿಸಿದ 6G ಏನು?; ಇದು 5G ಗಿಂತ ಹೇಗೆ ಭಿನ್ನ?

0



ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ 6G ಯುಗ ಪ್ರವೇಶಿಸಲು ಭಾರತ ಸಜ್ಜಾಗುತ್ತಿದೆ ಎಂದು ಪ್ರಕಟಿಸಿದ್ದರು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಜತೆಗೆ, ಭಾರತ ಜಾಗತಿಕವಾಗಿ ಇಂಟರ್‍ ನೆಟ್ ಸೇವೆಯಲ್ಲಿ ತೀರಾ ಕೈಗೆಟುಕುವ ದರದಲ್ಲಿ ನೀಡುತ್ತಿರುವ ದೇಶ ಎಂದು ಬಣ್ಣಿಸಿದ್ದರು.

5G ಯುಗದಿಂದ ತ್ವರಿತವಾಗಿ 6G ಯುಗಕ್ಕೆ ಬದಲಾಗಲು ಸಾಧ್ಯವಾಗುವಂತೆ 6G ಕಾರ್ಯಪಡೆಯನ್ನು ಈಗಾಗಲೇ ರಚಿಸಲಾಗಿದೆ ಎಂದು ಅವರು ವಿವರಿಸಿದ್ದರು. ದೇಶಾದ್ಯಂತ ಅತಿವೇಗವಾಗಿ 5G ಪರಿಚಯಿಸುವಲ್ಲಿ ಯಶಸ್ವಿಯಾದ್ದನ್ನೂ ಅವರು ವಿವರಿಸಿದ್ದರು. ದೇಶದ 22 ಪ್ರದೇಶಗಳಲ್ಲಿ ನಿಗದಿತ ವೇಳಾಪಟ್ಟಿಗಿಂತ ಮುನ್ನವೇ 5G ಸೇವೆ ಅರಂಭಿಸಿದ್ದಾಗಿ ರಿಲಯನ್ಸ್ ಜಿಯೊ ಪ್ರಕಟಿಸಿದೆ.

6G ಎಂದರೆ ಹೆಸರೇ ಸೂಚಿಸುವಂತೆ 5Gಯ ಮುಂದಿನ ಹೆಜ್ಜೆ. ಸೂಪರ್‍ಫಾಸ್ಟ್ 5G ಗಿಂತ 100 ಪಟ್ಟು ಅಧಿಕ ವೇಗದ ಇಂಟರ್ ನೆಟ್ ಸೌಲಭ್ಯ ಇದು ಎಂದು ಹೇಳಲಾಗುತ್ತಿದೆ. 5G ಪ್ರತಿ ಸೆಕೆಂಡ್‍ಗೆ 10 ಗಿಗಾಬೈಟ್ ವೇಗವನ್ನು ತಲುಪಿದರೆ 6G ಅಚ್ಚರಿಯ ಪ್ರಮಾಣದ ಅಂದರೆ ಸೆಕೆಂಡ್‍ಗೆ 1 ಟೆಟ್ರಾಬೈಟ್ ವೇಗವನ್ನು ಸಾಧಿಸಬಲ್ಲ ಪರಿಕಲ್ಪನೆಯಾಗಿದೆ.

6G ವಿವರ ನೀಡುವ ವೇಳೆ ಪ್ರಧಾನಿ ಮೋದಿ ಕೆಲ ಕುತೂಹಲಕರ ಅಂಶವನ್ನು ಹಂಚಿಕೊಂಡಿದ್ದಾರೆ. 6ಜಿ ಜಾರಿಗೆ ಬಂದ ಬಳಿಕ ಅನತಿ ದೂರದಿಂದ ಕೂಡಾ ನಾವು ಫ್ಯಾಕ್ಟರಿಗಳನ್ನು ನಿಯಂತ್ರಿಸಬಹುದಾಗಿದೆ, ಕಾರುಗಳನ್ನು ಚಲಾಯಿಸಬಹುದಾಗಿದೆ ಹಾಗೂ ಸ್ವಂತವಾಗಿ ಪರಸ್ಪರ ಮಾತನಾಡಲು ಸಾಧ್ಯವಾಗುವ ಜತೆಗೆ ಈ ಸಾಧನಗಳು ನಮ್ಮ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಲಿವೆ ಎಂದು ಹೇಳಿದ್ದರು. 6G ಬೆಂಬಲಿಸುವ ಸಾಧನಗಳು ಬ್ಯಾಟರಿಯಿಂದ ಚಾಲನೆಗೊಳ್ಳುವುದರಿಂದ ಸುಸ್ಥಿರತೆಗೂ ಇದು ಸಹಕಾರಿ ಎಂದು ವಿವರಿಸಿದ್ದರು.

6G ಕಾರ್ಯರೂಪಕ್ಕೆ ಬಂದಾಗ ನಾವು 100 ಸಿನಿಮಾಗಳನ್ನು ಕೇವಲ ಒಂದು ನಿಮಿಷದಲ್ಲಿ ಡೌನ್‍ಲೋಡ್ ಮಾಡಬಹುದಾಗಿದೆ. ಅಂಥ ವೇಗವನ್ನು ನಾವು ಸಾಧಿಸಬಹುದು. ಇದರ ಜತೆಗೆ ಡಿಜಿಟಲ್ ವಿಶ್ವವನ್ನು ಮತ್ತಷ್ಟು ಸನಿಹಕ್ಕೆ ತರಲಿದ್ದು, ನೈಜ ವಸ್ತುಗಳ ವರ್ಚುವಲ್ ಪ್ರತಿಗಳು ಹಾಗೂ ಸೂಪರ್ ಕೂಲ್ ಹೋಲೊಗ್ರಾಮ್‍ಗಳು ಡಿಜಿಟಲ್ ಅವಳಿಗಳನ್ನು ಸೃಷ್ಟಿಸಲು ಶಕ್ತವಾಗುತ್ತವೆ. ಇದರ ಜತೆಗೆ ವರ್ಚುವಲ್ ವಾಸ್ತವತೆ ಕೂಡಾ ಹೆಚ್ಚು ನೈಜ ಎನಿಸಲಿದೆ. ಆನ್‍ಲೈನ್ ಅನುಭವಗಳು ಕೂಡಾ ಹಿಂದೆಂದಿಗಿಂತಲೂ ನೈಜ ಜೀವನದ ಶೈಲಿಗೆ ಬದಲಾಗಲಿವೆ.

Leave A Reply

Your email address will not be published.