ಭಾರತಕ್ಕೆ ಆಂಗ್ಲರ ನಾಡಿನಲ್ಲಿ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶ: ಕುಂಬ್ಳೆ
ಚೆನ್ನೈ: ಇಂಗ್ಲೆಂಡ್ ತಂಡವನ್ನು ಅವರದ್ದೇ ನಾಡಿನಲ್ಲಿ ಮಣಿಸಲು ಬೇಕಾದಷ್ಟು ಬೌಲಿಂಗ್ ಹಾಗೂ ಬ್ಯಾಟಿಂಗ್ ಅನುಭವವನ್ನು ಭಾರತ ಕ್ರಿಕೆಟ್ ತಂಡ ಹೊಂದಿದ್ದು, ಮುಂಬರುವ ಬಹುನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
“ನಾವು ಅತ್ಯುತ್ತಮ ತಂಡವನ್ನು ಹೊಂದಿದ್ದೇವೆ. ಬೌಲಿಂಗ್‌ನಲ್ಲಿ ಅಪಾರ ಅನುಭವ ಸಂಪತ್ತನ್ನು ಪಡೆದಿದ್ದು, ಸ್ಥಿರವಾಗಿ ಎಲ್ಲ 20 ವಿಕೆಟುಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಬ್ಯಾಟಿಂಗ್ ವಿಭಾಗದತ್ತವೂ ಗಮನ ಹಾಯಿಸಿದರೆ ಅಗಾಧ ಅನುಭವ ಸಂಪತ್ತವನ್ನು ಹೊಂದಿರುವುದಾಗಿ” ಕುಂಬ್ಳೆ ವಿವರಿಸಿದರು.
“ಬೇಸಿಗೆಯ ಎರಡನೇ ಅವಧಿಯಲ್ಲಿ ಆಡುವುದು ಟೀಮ್ ಇಂಡಿಯಾಗೆ ನೆರವು ಮಾಡಲಿದ್ದು, ವಿಶ್ವಶ್ರೇಷ್ಠ ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ” ಎಂಬುದನ್ನು ಕುಂಬ್ಳೆ ಉಲ್ಲೇಖಿಸಿದರು. ಹಾಗೆಯೇ ಮಣಿಕಟ್ಟಿನ ಸ್ಪಿನ್ನರ್‌ಗಳು ಇಂಗ್ಲೆಂಡ್ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದನ್ನು ನುಡಿದರು.
“ಎಲ್ಲ ಆಟಗಾರರು ಸರಾಸರಿ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದು ಹೆಚ್ಚಿನ ಮೌಲ್ಯವನ್ನು ನೀಡುತ್ತಿದ್ದು, ಇದೇ ಮೊದಲ ಬಾರಿಯೇನಲ್ಲ ಆಂಗ್ಲರ ನಾಡಿಗೆ ಪ್ರಯಾಣಿಸುತ್ತಿರುವುದು. ಆಟಗಾರರು ಈ ಹಿಂದೆಯೂ ಅಲ್ಲಿಗೆ ಭೇಟಿ ಕೊಟ್ಟಿದ್ದು, ಇದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಗಲಿದೆ” ಎಂದು ಸೇರಿಸಿದರು.