EBM News Kannada
Leading News Portal in Kannada

ಭಾರತ-ಆಸ್ಟ್ರೇಲಿಯ ಪ್ರಥಮ ಟೆಸ್ಟ್ | ವಿವಾದಾತ್ಮಕ ತೀರ್ಪಿಗೆ ಬಲಿಯಾದರೆ ಕೆ.ಎಲ್.ರಾಹುಲ್?

0


ಪರ್ತ್: ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದೆಡೆ ನೆಲಕಚ್ಚಿ ಆಡುತ್ತಿದ್ದ ಕೆ.ಎಲ್. ರಾಹುಲ್, ಮೂರನೆಯ ಅಂಪೈರ್ ನೀಡಿದ ಕೆಟ್ಟ ತೀರ್ಪಿಗೆ ಬಲಿಯಾದರೆ ಎಂಬ ಚರ್ಚೆ ಭುಗಿಲೆದ್ದಿದೆ. ಇದರ ಬೆನ್ನಿಗೇ, ಕೆ.ಎಲ್.ರಾಹುಲ್ ರ ವಿವಾದಾತ್ಮಕ ಔಟ್ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ, ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ಗುರಿಯಾಯಿತು. ಒಂದೆಡೆ ವಿಕೆಟ್ ಗಳು ಪತನವಾಗುತ್ತಿದ್ದರೆ, ಮತ್ತೊಂದೆಡೆ ನೆಲಕಚ್ಚಿ ತಾಳ್ಮೆಯ ಆಟವಾಡುತ್ತಿದ್ದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ವಿರುದ್ಧ ಕೇಳಿ ಬಂದ ಮೂರನೆ ಅಂಪೈರ್ ತೀರ್ಪು ವಿವಾದಕ್ಕೆ ಗುರಿಯಾಗಿದೆ.

ಮಿಚೆಲ್ ಸ್ಟಾರ್ಕ್ ಎಸೆದ 22 ಓವರ್ ನ ಎರಡನೇ ಬಾಲ್ ಅನ್ನು ಕೆ.ಎಲ್.ರಾಹುಲ್ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿದರು. ಆದರೆ, ಬಾಲ್ ಅವರ ಬ್ಯಾಟನ್ನು ವಂಚಿಸಿ ವಿಕೆಟ್ ಕೀಪರ್ ಕೈಸೇರಿತು. ಆಗ ಸ್ಲಿಪ್ ನಲ್ಲಿದ್ದ ಫೀಲ್ಡರ್ ಗಳು ಸೇರಿದಂತೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕ್ಯಾಚ್ ಗೆ ಮನವಿ ಮಾಡಿದರು. ಆದರೆ, ಫೀಲ್ಡ್ ಅಂಪೈರ್ ಅವರ ಮನವಿಯನ್ನು ತಿರಸ್ಕರಿಸಿದರು. ನಂತರ ಆಸ್ಟ್ರೇಲಿಯ ಆಟಗಾರರು DRS ಮೊರೆ ಹೋದರು.

ಸ್ನಿಕೊಮೀಟರ್ ನಲ್ಲಿನ ಏರಿಳಿತವನ್ನು ಪರಿಗಣಿಸಿದ ಮೂರನೆಯ ಅಂಪೈರ್, ರಾಹುಲ್ ಔಟೆಂದು ತೀರ್ಪಿತ್ತರು. ಇದರಿಂದ ಫೀಲ್ಡ್ ಅಂಪೈರ್ ಕೂಡಾ ಅವರನ್ನು ಔಟೆಂದು ಘೋಷಿಸಿದರು. ಇದರಿಂದ ಕುಪಿತರಾದ ರಾಹುಲ್, ಅಸಮಾಧಾನದಿಂದಲೇ ಮೈದಾನದಿಂದ ಹೊರ ನಡೆದರು.

ವಾಸ್ತವವಾಗಿ, ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು, ರಾಹುಲ್ ಪ್ಯಾಡ್ ಗೆ ತಾಗಿತ್ತು. ಅಲ್ಲದೆ, ಈಗ ಹೊರ ಬಿದ್ದಿರುವ ವಿಡಿಯೊಗಳಲ್ಲಿ ರಾಹುಲ್ ಬ್ಯಾಟ್ ಮತ್ತು ಚೆಂಡಿನ ನಡುವೆ ಅಂತರವಿರುವುದು ಕಂಡು ಬರುತ್ತಿದೆ. ಹೀಗಿದ್ದೂ, ಚೆಂಡು ಬ್ಯಾಟ್ ಗೆ ತಾಗಿದೆಯೊ ಅಥವಾ ಪ್ಯಾಡ್ ಗೆ ತಾಗಿದೆಯೊ ಎಂದು ಖಾತರಿಪಡಿಸಿಕೊಳ್ಳದೆ, ಸ್ನಿಕೊಮೀಟರ್ ಏರಿಳಿತವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡ ಮೂರನೆಯ ಅಂಪೈರ್, ರಾಹುಲ್ ಔಟೆಂದು ತೀರ್ಪು ನೀಡಿಬಿಟ್ಟರು. ಒಂದು ವೇಳೆ, ಚೆಂಡು ಬ್ಯಾಟ್ ಗೆ ತಾಗಿದೆಯೆ ಇಲ್ಲವೊ ಎಂಬ ಅಸ್ಪಷ್ಟತೆ ಇದ್ದರೆ, ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನೇ ಮೂರನೆಯ ಅಂಪೈರ್ ಎತ್ತಿ ಹಿಡಿಯಬೇಕಾಗುತ್ತದೆ. ಆದರೆ, ಈ ಕುರಿತು ಸೂಕ್ತ ಪರಿಶೀಲನೆ ನಡೆಸದೆ ರಾಹುಲ್ ಔಟೆಂದು ತೀರ್ಪು ನೀಡಿದ ಮೂರನೆಯ ಅಂಪೈರ್ ವಿರುದ್ಧ ಭಾರತದ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಈ ಇನಿಂಗ್ಸ್ ನಲ್ಲಿ 74 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್ ನಲ್ಲಿ 3000 ರನ್ ಪೂರೈಸಿದರು.



Leave A Reply

Your email address will not be published.