ಕೇಂದ್ರ ಸರಕಾರದಿಂದ ಅನುಮತಿ ನಿರಾಕರಣೆ | ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದ ಭಾರತ ಕ್ರಿಕೆಟ್ ತಂಡ
ಹೊಸದಿಲ್ಲಿ : ಪಾಕಿಸ್ತಾನದಲ್ಲಿ ನವೆಂಬರ್ 23ರಿಂದ ಡಿಸೆಂಬರ್ 3ರ ತನಕ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಟೂರ್ನಿಯಿಂದ ಭಾರತ ಕ್ರಿಕೆಟ್ ತಂಡವು ಅಧಿಕೃತವಾಗಿ ಹಿಂದೆ ಸರಿದಿದೆ.
ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಕೇಂದ್ರ ಸರಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತದ ಅಂಧರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಷ್ಟ್ರೀಯ ಫೆಡರೇಶನ್ ಮಂಗಳವಾರ ತಿಳಿಸಿದೆ.
ನ.23ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ತಂಡವು ವಾಘಾ ಗಡಿಯನ್ನು ದಾಟಬೇಕಾಗಿತ್ತು.
ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಲು ಕ್ರೀಡಾ ಸಚಿವಾಲಯದಿಂದ ಸರಕಾರಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು(ಎನ್‌ಒಸಿ)ಪಡೆದಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ(ಎಂಇಒ)ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ.
ಅಂಧರ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ ಎಂದು ನಮಗೆ ಅಧಿಕೃತವಾಗಿ ತಿಳಿಸಲಾಗಿದೆ. ನಾವು ನಾಳೆ ವಾಘಾ ಗಡಿಗೆ ಪ್ರಯಾಣಿಸಲು ನಿರ್ಧರಿಸಿದ್ದೆವು. ಆದರೆ ಸದ್ಯಕ್ಕೆ ಸಚಿವಾಲಯದ ಅಧಿಕಾರಿಗಳಿಂದ ಯಾವುದೇ ಅನುಮತಿ ಬಂದಿಲ್ಲ. ಹೀಗಾಗಿ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ ಎಂದು ಭಾರತದ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ಮುಖ್ಯವಾಹಿನಿಯ ಕ್ರಿಕೆಟ್ ತಂಡವು ಸುರಕ್ಷಿತವಾಗಿಲ್ಲದಿರುವಾಗ ನೀವು ಅಲ್ಲಿ ಹೇಗೆ ಸುರಕ್ಷಿತವಾಗಿರುತ್ತೀರಿ ಎಂದು ಅವರು ಹೇಳುತ್ತಿದ್ದಾರೆ. ಖಂಡಿತ ನಾವು ಈ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಈ ನಿರ್ಧಾರವನ್ನು ಕೊನೆಯ ಕ್ಷಣದ ತನಕವೂ ಏಕೆ ಹಿಡಿದಿಟ್ಟುಕೊಳ್ಳಬೇಕು. ಒಂದು ತಿಂಗಳು ಅಥವಾ 25 ದಿನಗಳ ಹಿಂದೆ ಏಕೆ ತಿಳಿಸಬಾರದಿತ್ತು. ಎಲ್ಲದ್ದಕ್ಕೂ ಒಂದು ಪ್ರಕ್ರಿಯೆ ಇದೆ ಎಂದು ಯಾದವ್ ಹೇಳಿದ್ದಾರೆ.
ಅಂಧರ ಕ್ರಿಕೆಟ್ ತಂಡವು ಸದ್ಯ ಹೊಸದಿಲ್ಲಿಯಲ್ಲಿ ಉಳಿದುಕೊಂಡಿದೆ. ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ಮೊದಲು ಅದು 25 ದಿನಗಳ ತರಬೇತಿ ಶಿಬಿರವನ್ನು ನಡೆಸಿದ್ದರು.
ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡಕ್ಕೂ ಸರಕಾರ ಅನುಮತಿ ನಿರಾಕರಿಸಿದ ಹೊತ್ತಿನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರಕಾರವು ತಂಡವನ್ನು ಗಡಿಯಾಚೆ ಕಳುಹಿಸಲು ಬಿಸಿಸಿಐಗೆ ಅನುಮತಿ ನಿರಾಕರಿಸಿದೆ.
ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಸಮರ್ಥನಾಗಿದ್ದೇನೆ ಎಂದು ಬಿಸಿಸಿಐ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ವಿಶ್ವ ಕ್ರೀಡಾ ಆಡಳಿತ ಮಂಡಳಿಯು ಈ ಮಾಹಿತಿಯನ್ನು ಪಿಸಿಬಿಗೆ ತಿಳಿಸಿದೆ. ಹೀಗಾಗಿ 3 ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯು ಇನ್ನೂ ಬಿಡುಗಡೆಯಾಗಿಲ್ಲ.