ಹೊಸದಿಲ್ಲಿ : ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಸಂಬಂಧಿಸಿದ ಹೊಸ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮಿಂಚಿದ್ದು, ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಭಾರತದ ಆಲ್‌ರೌಂಡರ್ ಹಾರ್ದಿಕ ಪಾಂಡ್ಯ ಐಸಿಸಿ ಟಿ20 ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಿಂದ ಗೆದ್ದಿರುವ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಾಂಡ್ಯ ನಂ.1ಸ್ಥಾನಕ್ಕೆ ಮರಳಿದ್ದಾರೆ. ಆಫ್ರಿಕಾ ವಿರುದ್ಧ ಸರಣಿಯಲ್ಲಿ ಪಾಂಡ್ಯ ಅವರು ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಪ್ರಮುಖ ಪಾತ್ರವಹಿಸಿದ್ದರು.
ಭಾರತದ ಯುವ ಬ್ಯಾಟರ್ ತಿಲಕ್ ವರ್ಮಾ ಪುರುಷರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಹರಿಣ ಪಡೆ ವಿರುದ್ಧ ಎರಡು ಶತಕಗಳ ಸಹಿತ ಒಟ್ಟು 280 ರನ್ ಗಳಿಸಿದ್ದ ತಿಲಕ್ 69 ಸ್ಥಾನಗಳಲ್ಲಿ ಭಡ್ತಿ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್(4ನೇ ಸ್ಥಾನ)ರನ್ನು ಹಿಂದಿಕ್ಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ತಿಲಕ್ ವರ್ಮಾ ಟಿ20 ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ರ‍್ಯಾಂಕ್ ಪಡೆದಿರುವ ಭಾರತದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿದ್ದ ಭಾರತದ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಟಿ20 ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಿ 22ನೇ ಸ್ಥಾನ ತಲುಪಿದ್ದಾರೆ.
ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಾದ ಟ್ರಿಸ್ಟನ್ ಸ್ಟಬ್ಸ್(23ನೇ ಸ್ಥಾನ) ಹಾಗೂ ಹೆನ್ರಿಕ್ ಕ್ಲಾಸೆನ್(59ನೇ ಸ್ಥಾನ)ಕೂಡ ಪ್ರಗತಿ ಸಾಧಿಸಿದ್ದಾರೆ.
ಪುರುಷರ ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಜೀವನಶ್ರೇಷ್ಠ 9ನೇ ರ‍್ಯಾಂಕ್ ಪಡೆದಿದ್ದಾರೆ.
ಆಸ್ಟ್ರೇಲಿಯದ ಬೌಲರ್‌ಗಳಾದ ಆಡಮ್ ಝಂಪಾ ಹಾಗೂ ನಾಥನ್ ಎಲ್ಲಿಸ್ ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಿದ್ದಾರೆ.
ಇತ್ತೀಚೆಗೆ ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯನ್ನು ಗೆದ್ದಿರುವ ಶ್ರೀಲಂಕಾ ಕ್ರಿಕೆಟಿಗರು ರ‍್ಯಾಂಕಿಂಗ್‌ನಲ್ಲಿ ಸುಧಾರಣೆ ಕಂಡಿದ್ದಾರೆ.
ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಿರುವ ಕುಶಾಲ್ ಮೆಂಡಿಸ್ 12ನೇ ಸ್ಥಾನ ಹಂಚಿಕೊಂಡಿದ್ದಾರೆ. ಸ್ಥಿರ ಪ್ರದರ್ಶನ ನೀಡಿದ ನಂತರ ಮಹೀಶ್ ತೀಕ್ಷಣ ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಶ್ರೀಲಂಕಾದ ಬ್ಯಾಟರ್‌ಗಳಾದ ಮೆಂಡಿಸ್ ಹಾಗೂ ಅವಿಷ್ಕಾ ಫೆರ್ನಾಂಡೊ ಇಬ್ಬರೂ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದ್ದ ನ್ಯೂಝಿಲ್ಯಾಂಡ್‌ನ ವಿಲ್ ಯಂಗ್ 22ನೇ ಸ್ಥಾನಕ್ಕೇರಿದ್ದಾರೆ.