EBM News Kannada
Leading News Portal in Kannada

ದಕ್ಷಿಣ ಆಫ್ರಿಕಾ ಪ್ರವಾಸ | ಶ್ರೀಲಂಕಾ ತಂಡಕ್ಕೆ ಕಸುನ್ ರಜಿತಾ, ಲಸಿತ್ ಪುನರಾಗಮನ | South Africa Tour

0


ಕೊಲಂಬೊ, ನ.19: ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಮಂಗಳವಾರ 16 ಸದಸ್ಯರನ್ನು ಒಳಗೊಂಡ ತನ್ನ ತಂಡವನ್ನು ಪ್ರಕಟಿಸಿದ್ದು, ಕಸುನ್ ರಜಿತಾ ಹಾಗೂ ಲಸಿತ್ ಎಂಬುಲ್ಡೇನಿಯ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯವು ನವೆಂಬರ್ 27ರಂದು ಡರ್ಬನ್‌ನಲ್ಲಿ ಆರಂಭವಾಗಲಿದೆ. ಆ ನಂತರ ಡಿ.5ರಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಆಡಿದ್ದ 31ರ ಹರೆಯದ ರಜಿತಾ ಸೆಪ್ಟಂಬರ್‌ನಲ್ಲಿ ಸ್ವದೇಶದಲ್ಲಿ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 2-0 ಅಂತರದಿಂದ ಮಣಿಸಿದ್ದ ಲಂಕಾ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

ಇದೇ ವೇಳೆ ಎಂಬುಲ್ಡೇನಿಯರನ್ನು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಕರೆ ನೀಡಲಾಗಿದ್ದು, ಅವರು 2022ರ ಜುಲೈನಲ್ಲಿ ಕೊನೆಯ ಪಂದ್ಯ ಆಡಿದ್ದರು. ಶ್ರೀಲಂಕಾ ಕ್ರಿಕೆಟ್ ತಂಡವನ್ನು ಧನಂಜಯ ಡಿಸಿಲ್ವ ನಾಯಕನಾಗಿ ಮುನ್ನಡೆಸಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯ ಹಾಗೂ ಭಾರತದ ನಂತರ 3ನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಇನ್ನುಳಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸುವ ಅಗತ್ಯವಿದೆ. ಇದರಲ್ಲಿ ಮುಂದಿನ ವರ್ಷ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ 2 ಪಂದ್ಯಗಳ ಸರಣಿಯೂ ಸೇರಿದೆ.

*ಶ್ರೀಲಂಕಾ ತಂಡ: ಧನಂಜಯ ಡಿಸಿಲ್ವ(ನಾಯಕ), ಪಥುಮ್ ನಿಸ್ಸಾಂಕ, ಡಿ,ಕರುಣರತ್ನೆ, ದಿನೇಶ್ ಚಾಂಡಿಮಾಲ್, ಆಂಜೆಲೊ ಮ್ಯಾಥ್ಯೂಸ್, ಕುಸಾಲ್ ಮೆಂಡಿಸ್, ಕಮಿಂದು ಮೆಂಡಿಸ್, ಒಶಾಡಾ ಫೆರ್ನಾಂಡೊ,ಸದೀರ ಸಮರವಿಕ್ರಮ, ಪ್ರಭಾತ್ ಜಯಸೂರ್ಯ, ನಿಶಾನ್ ಪೆರಿಸ್, ಲಸಿತ್ ಎಂಬುಲ್ಡೇನಿಯ, ಮಿಲನ್ ರತ್ನನಾಯಕೆ, ಅಸಿಥಾ ಫೆರ್ನಾಂಡೊ, ವಿಶ್ವ ಫೆರ್ನಾಂಡೊ, ಲಹಿರು ಕುಮಾರ.

Leave A Reply

Your email address will not be published.