ಹೊಸದಿಲ್ಲಿ : ಆಸ್ಟ್ರೇಲಿಯದಲ್ಲಿ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡದೆ ಇದ್ದರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಭಾರತವು ರೋಹಿತ್ ಬದಲಿಗೆ ಆಟಗಾರನನ್ನು ಆಯ್ಕೆ ಮಾಡಲು ಸಿದ್ಧರಾಗುವ ಅಗತ್ಯವಿದೆ ಎಂದು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
ಜೂನ್ ನಲ್ಲಿ ಭಾರತ ತಂಡವು ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಜಯಿಸಿದ ನಂತರ ರೋಹಿತ್ ಟಿ20 ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದರು. 37ರ ಹರೆಯದ ರೋಹಿತ್ ಸದ್ಯ ಕಳಪೆ ಫಾರ್ಮ್ನಲ್ಲಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿರುವ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ಭಾರತ ಸೋಲಲು ಅವರ ಕಳಪೆ ನಾಯಕತ್ವವೂ ಕಾರಣವಾಗಿತ್ತು.
ಭಾರತ ತಂಡವು ನವೆಂಬರ್ 22ರಂದು ಪರ್ತ್ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಇಲ್ಲದೆ ಆಡುವ ಸಾಧ್ಯತೆಯಿದೆ. ರೋಹಿತ್ ವೈಯಕ್ತಿಕ ಕಾರಣಗಳಿಂದಾಗಿ ಈ ಪಂದ್ಯದಲ್ಲಿ ಆಡುವುದಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡವು ಸತತ ಮೂರನೇ ಬಾರಿ ಸ್ಥ್ಥಾನ ಪಡೆಯಬೇಕಾದರೆ ಆಸ್ಟ್ರೇಲಿಯ ವಿರುದ್ಧ 5 ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸುವ ಅಗತ್ಯವಿದೆ.
ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡದೇ ಇದ್ದರೆ, ನನ್ನ ಪ್ರಕಾರ ಅವರೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಾರೆ. ಆಗ ಅವರು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡುತ್ತಾರೆ. ಅವರು ಈಗಾಗಲೇ ಟಿ20 ಕ್ರಿಕೆಟ್ ಅನ್ನು ತೊರೆದಿದ್ದಾರೆ. ಅವರಿಗೆ ಕೂಡ ವಯಸ್ಸಾಗುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶ್ರೀಕಾಂತ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ 42.27ರ ಸರಾಸರಿಯಲ್ಲಿ 4,270 ರನ್ ಗಳಿಸಿದ್ದಾರೆ. ಆದರೆ ಇತ್ತೀಚೆಗಿನ ಪ್ರದರ್ಶನದಿಂದ ತೀವ್ರ ಟೀಕೆ ಎದುರಿಸಿದ್ದಾರೆ.
ಹಿಂದಿನ 10 ಇನಿಂಗ್ಸ್ಗಳಲ್ಲಿ ಆರು ಬಾರಿ ಒಂದಂಕಿಯನ್ನು ಗಳಿಸಿದ್ದು, ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಕಿವೀಸ್ ವಿರುದ್ಧ ಪಂದ್ಯದಲ್ಲಿ ನಿರ್ಣಾಯಕ ಸಮಯದಲ್ಲಿ ನಿರ್ಲಕ್ಷಿತ ಹೊಡೆತಗಳನ್ನು ಬಾರಿಸಿದ್ದರು.
ಸರಣಿಯುದ್ದಕ್ಕೂ ತನ್ನ ಕಳಪೆ ಬ್ಯಾಟಿಂಗ್ ಹಾಗೂ ನೀರಸ ನಾಯಕತ್ವವನ್ನು ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರನ್ನು ಶ್ಲಾಘಿಸುವೆ. ಆಟಗಾರ ತನ್ನ ತಪ್ಪನ್ನು ಒಪ್ಪಿಕೊಳ್ಳುವುದು ಅತ್ಯಂತ ಮುಖ್ಯ. ಇದು ಮನುಷ್ಯನ ಅತ್ಯಂತ ಉತ್ತಮ ಗುಣ. ಅವರು ತನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದು ಶ್ರೀಕಾಂತ್ ಹೇಳಿದ್ದಾರೆ.