EBM News Kannada
Leading News Portal in Kannada

ಭಾರತ-ನ್ಯೂಝಿಲೆಂಡ್ ಪ್ರಥಮ ಟೆಸ್ಟ್| ಶತಕ ಸಿಡಿಸಿದ ರಚಿನ್ ರವೀಂದ್ರ

0


ಬೆಂಗಳೂರು: ಬೆಂಗಳೂರು ಮೂಲದ ಬ್ಯಾಟರ್ ರಾಚಿನ್ ರವೀಂದ್ರ ಸಿಡಿಸಿದ ಶತಕದ ನೆರವಿನಿಂದ 402 ರನ್ ಗಳ ಉತ್ತಮ ಮೊತ್ತವನ್ನು ಕಲೆ ಹಾಕಿರುವ ನ್ಯೂಝಿಲೆಂಡ್, 356 ರನ್ ಗಳ ಬೃಹತ್ ಮುನ್ನಡೆ ಗಳಿಸಿದೆ.

ಭಾರತ ತಂಡವನ್ನು ಕೇವಲ 46 ರನ್ ಗಳಿಗೆ ಕಟ್ಟಿ ಹಾಕಿದ ನಂತರ, ತನ್ನ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು, ಆರಂಭಿಕ ಆಟಗಾರ ಡ್ವೇನ್ ಕಾನ್ವೆ (91) ಹಾಗೂ ರಚಿನ್ ರವೀಂದ್ರ (134)ರ ಅಮೋಘ ಆಟದಿಂದ 402 ರನ್ ಗಳ ಉತ್ತಮ ಮೊತ್ತ ಪೇರಿಸಿದೆ. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡ್ವೇನ್ ಕಾನ್ವೆ ಕೇವಲ 105 ಎಸೆತಗಳಲ್ಲಿ 91 ರನ್ ಗಳಿಸಿ, ರವಿಚಂದ್ರನ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಅವರು ಕೇವಲ 9 ರನ್ ಗಳಿಂದ ಶತಕ ವಂಚಿತರಾದರು.

ನಂತರ, ನಾಲ್ಕನೆಯ ಸರದಿಯಲ್ಲಿ ಬ್ಯಾಟಿಂಗ್ ಗೆ ಬಂದ ರಚಿನ್ ರವೀಂದ್ರ ಕೇವಲ 157 ಬಾಲ್ ಗಳಲ್ಲಿ 134 ರನ್ ಗಳಿಸಿದರು. ಅವರ ಈ ಮೊತ್ತದಲ್ಲಿ ನಾಲ್ಕು ಸಿಕ್ಸರ್ ಹಾಗೂ 13 ಬೌಂಡರಿಗಳಿದ್ದವು. ರಚಿನ್ ರವೀಂದ್ರ ಪಾಲಿಗೆ ಬೆಂಗಳೂರಿನಲ್ಲಿ ಇದು ಚೊಚ್ಚಲ ಶತಕವಾಗಿದೆ. ರಚಿನ್ ರವೀಂದ್ರರ ತಂದೆ ಬೆಂಗಳೂರು ಮೂಲದವರಾಗಿರುವುದರಿಂದ, ಈ ಶತಕ ಅವರ ಪಾಲಿಗೆ ವಿಶೇಷವಾಗಿದೆ.

ನ್ಯೂಝಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ ಕೂಡಾ ಅಮೂಲ್ಯ 65 ರನ್ ಗಳಿಸುವ ಮೂಲಕ, ತಂಡದ ಮೊತ್ತ ಮತಷ್ಟು ಹಿಗ್ಗುವಂತೆ ಮಾಡಿದರು.

ಎರಡನೆ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು, ಇತ್ತೀಚಿನ ವರದಿಗಳ ಪ್ರಕಾರ, ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (29) ಹಾಗೂ ನಾಯಕ ರೋಹಿತ್ ಶರ್ಮ (27) ಆಡುತ್ತಿದ್ದಾರೆ.

Leave A Reply

Your email address will not be published.