ಕರಾಚಿ : ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ ಮೂರನೇ ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಮಾಜಿ ನಾಯಕ ಬಾಬರ್ ಆಝಮ್ ಹಾಗೂ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರನ್ನು ರವಿವಾರ ಕೈಬಿಡಲಾಗಿದೆ.
ಮುಲ್ತಾನ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಅಂತರದ ಸೋಲಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ರವಿವಾರ ತಂಡವನ್ನು ಪ್ರಕಟಿಸಿದ್ದು, ಬಾಬರ್ ಹಾಗೂ ಶಾಹೀನ್ ರನ್ನು 16 ಸದಸ್ಯರ ತಂಡದಲ್ಲಿ ಸೇರಿಸಲಾಗಿಲ್ಲ.
ಟೀಕೆಗೆ ಒಳಗಾಗಿರುವ ಶಾನ್ ಮಸೂದ್ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ.
ಬಾಬರ್ ಹಿಂದಿನ 18 ಟೆಸ್ಟ್ ಇನಿಂಗ್ಸ್ ಗಳಲ್ಲಿ ಅರ್ಧಶತಕವನ್ನು ಗಳಿಸಿಲ್ಲ. ಇಂಗ್ಲೆಂಡ್ ವಿರುದ್ಧ ಸೋತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 30 ಹಾಗೂ 5 ರನ್ ಗಳಿಸಿದ್ದರು.
ವೇಗಿ ನಸೀಂ ಶಾ ಹಾಗೂ ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ರನ್ನು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ತಂಡದಲ್ಲಿ ನಾಲ್ವರು ಪ್ರಮುಖ ಆಟಗಾರರ ಬದಲಿಗೆ ಹಸೀಬುಲ್ಲಾ, ಮೆಹ್ರಾನ್ ಮುಮ್ತಾಝ್, ಕಾಮ್ರಾನ್ ಗುಲಾಂ, ವೇಗದ ಬೌಲರ್ ಮುಹಮ್ಮದ್ ಅಲಿ ಹಾಗೂ ಆಫ್ ಸ್ಪಿನ್ನರ್ ಸಾಜಿದ್ ಖಾನ್ರನ್ನು ಆಯ್ಕೆ ಮಾಡಲಾಗಿದೆ ಎಂದು ಪಿಸಿಬಿ ತಿಳಿಸಿದೆ.
2022ರ ಡಿಸೆಂಬರ್ ನಲ್ಲಿ ಕರಾಚಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 161 ರನ್ ಗಳಿಸಿದ ನಂತರ ಬಾಬರ್ ಅವರು ದೇಶೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಪರದಾಟ ನಡೆಸುತ್ತಿದ್ದಾರೆ.
ಪಾಕಿಸ್ತಾನ ತಂಡ (2ನೇ ಹಾಗೂ 3ನೇ ಟೆಸ್ಟ್)
ಶಾನ್ ಮಸೂದ್(ನಾಯಕ), ಸೌದ್ ಶಕೀಲ್(ಉಪ ನಾಯಕ), ಆಮಿರ್ ಜಮಾಲ್, ಅಬ್ದುಲ್ಲಾ ಶಫೀಕ್, ಹಸೀಬುಲ್ಲಾ(ವಿಕೆಟ್-ಕೀಪರ್), ಕಾಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಝ್, ಮೀರ್ ಹಂಝಾ, ಮುಹಮ್ಮದ್ ಅಲಿ, ಮುಹಮ್ಮದ್ ಹುರೈರಾ, ಮುಹಮ್ಮದ್ ರಿಝ್ವಾನ್(ವಿಕೆಟ್ಕೀಪರ್), ನೋಮನ್ ಅಲಿ, ಸಯೀಮ್ ಅಯ್ಯೂಬ್, ಸಾಜಿದ್ ಖಾನ್, ಸಲ್ಮಾನ್ ಅಲಿ ಆಘಾ ಹಾಗೂ ಝಾಹಿದ್ ಮೆಹ್ಮೂದ್.