EBM News Kannada
Leading News Portal in Kannada

ಶತಕದ ಮೂಲಕ ಆಯ್ಕೆಗಾರರಿಗೆ ಸಂದೇಶ ರವಾನಿಸಿದ ಅಭಿಮನ್ಯು ಈಶ್ವರನ್

0


ಹೊಸದಿಲ್ಲಿ: ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಭಿಮನ್ಯು ಈಶ್ವರನ್ ಅವರು ಋತುರಾಜ್ ಗಾಯಕ್ವಾಡ್ ಬದಲಿಗೆ ಟೀಮ್ ಇಂಡಿಯಾವನ್ನು ಸೇರಿದ್ದರು. ಆದರೆ, ಪ್ರತಿಭಾವಂತ ಬಲಗೈ ಆಟಗಾರ ಟೆಸ್ಟ್ ಕ್ರಿಕೆಟಿಗೆ ಕಾಲಿಡಲಿಲ್ಲ. ಭಾರತದ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇಬ್ಬರು ಖಾಯಂ ಆರಂಭಿಕ ಆಟಗಾರರಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯದ ಸುದೀರ್ಘ ಕ್ರಿಕೆಟ್ ಪ್ರವಾಸಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಮೂರನೇ ಆರಂಭಿಕ ಆಟಗಾರನನ್ನು ಆಯ್ಕೆ ಮಾಡಬಹುದು.

ಲಕ್ನೊದಲ್ಲಿ ಗುರುವಾರ ನಡೆದ ಮುಂಬೈ ವಿರುದ್ಧದ ಇರಾನಿ ಕಪ್ ಹಣಾಹಣಿಯಲ್ಲಿ ಶೇಷ ಭಾರತದ ಪರ ಆಕರ್ಷಕ ಶತಕ (ಔಟಾಗದೆ 151, 212 ಎಸೆತ, 12 ಬೌಂಡರಿ, 1 ಸಿಕ್ಸರ್) ಗಳಿಸುವ ಮೂಲಕ ಈಶ್ವರನ್ ಆಯ್ಕೆಗಾರರಿಗೆ ಪ್ರಬಲ ಸಂದೇಶ ರವಾನಿಸಿದರು.

ಮೋಹಿತ್ ಅವಸ್ಥಿ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಈಶ್ವರನ್ 117 ಎಸೆತಗಳಲ್ಲಿ ಶತಕ ಪೂರೈಸಿದರು. ಬಂಗಾಳದ ಬ್ಯಾಟರ್ ಈಶ್ವರನ್ 3 ಪಂದ್ಯಗಳಲ್ಲಿ ಮೂರನೇ ಶತಕ ದಾಖಲಿಸಿದರು. ಇತ್ತೀಚೆಗೆ ಕೊನೆಗೊಂಡಿರುವ ದುಲೀಪ್ ಟ್ರೋಫಿಯಲ್ಲಿ ಎರಡು ಶತಕಗಳನ್ನು ಗಳಿಸಿದ್ದರು.

ಬಂಗಾಳದ ದೇಶೀಯ ಕ್ರಿಕೆಟ್‌ನಲ್ಲಿ 29ರ ಹರೆಯದ ಈಶ್ವರನ್ ಸ್ಥಿರ ಪ್ರದರ್ಶನದ ಮೂಲಕ ಅಗ್ರ ರನ್ ಸ್ಕೋರರ್ ಆಗಿದ್ದಾರೆ. 2018-19ರ ರಣಜಿ ಟ್ರೋಫಿಯಲ್ಲಿ 800ಕ್ಕೂ ಅಧಿಕ ರನ್ ಗಳಿಸಿ ಮಿಂಚಿದ್ದರು.

2018-19ರ ಋತುವಿನಲ್ಲಿ ಈಶ್ವರನ್ 95.66ರ ಸರಾಸರಿಯಲ್ಲಿ ಒಟ್ಟು 861 ರನ್ ಗಳಿಸಿದ್ದು ಪಂಜಾಬ್ ವಿರುದ್ಧ ಜೀವನಶ್ರೇಷ್ಠ 233 ರನ್ ಗಳಿಸಿದ್ದರು. 2019-20ರ ಋತುವಿನಲ್ಲಿ ಬಂಗಾಳದ ತಂಡ ರಣಜಿ ಟ್ರೋಫಿ ಫೈನಲ್‌ಗೆ ತಲುಪುವಲ್ಲಿ ಈಶ್ವರನ್ ನಿರ್ಣಾಯಕ ಪಾತ್ರವಹಿಸಿದ್ದರು.

Leave A Reply

Your email address will not be published.