EBM News Kannada
Leading News Portal in Kannada

ಶಾಂಘೈ ಮಾಸ್ಟರ್ಸ್ | ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಸುಮಿತ್ ನಾಗಲ್ | Shanghai Masters

0


ಶಾಂಘೈ: ಚೀನಾದ ಯು ಯಿಬಿಂಗ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ನೇರ ಸೆಟ್‌ಗಳ ಅಂತರದಿಂದ ಸೋತಿರುವ ಭಾರತದ ಯುವ ಟೆನಿಸ್ ಪಟು ಸುಮಿತ್ ನಾಗಲ್ ಶಾಂಘೈ ಮಾಸ್ಟರ್ಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಬು‘ವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 27ರ ಹರೆಯದ ನಾಗಲ್‌ರನ್ನು ಚೀನಾದ ಆಟಗಾರ 6-3, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಡೇವಿಸ್ ಕಪ್‌ನಲ್ಲಿ ತನ್ನ ಭಾಗವಹಿಸುವಿಕೆಗೆ ಸಂಬಂಧಿಸಿ ಇತ್ತೀಚೆಗೆ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಯೊಂದಿಗೆ ಸಂಘರ್ಷದಲ್ಲಿ ತೊಡಗಿದ್ದ ನಾಗಲ್ ಹೆಚ್ಚು ಚರ್ಚೆಯಲ್ಲಿದ್ದರು.

ಭಾರತದ ಪರ ಡೇವಿಸ್ ಕಪ್ ಪಂದ್ಯ ಆಡಲು ಸುಮಿತ್ ನಾಗಲ್ ವರ್ಷಕ್ಕೆ 50,000 ಯುಎಸ್ ಡಾಲರ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಎಐಟಿಎ ಆರೋಪಿಸಿತ್ತು. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ದೇಶದ ಅಗ್ರ ಸಿಂಗಲ್ಸ್ ಆಟಗಾರ ನಾಗಲ್, ಕ್ರೀಡಾಪಟುಗಳು ತಮ್ಮ ದೇಶವನ್ನು ಪ್ರತಿನಿಧಿಸುವಾಗಲೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪರಿಹಾರ ನೀಡುವುದು ವೃತ್ತಿಪರ ಕ್ರೀಡೆಗಳಲ್ಲಿ ಒಂದು ವಾಡಿಕೆಯಾಗಿದೆ. ಇದು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಎಐಟಿಎ ಹಾಗೂ ಡೇವಿಸ್ ಕಪ್ ನಾಯಕನೊಂದಿಗೆ ನನ್ನ ಚರ್ಚೆ ಗೌಪ್ಯವಾಗಿದ್ದು, ಈ ಬಗ್ಗೆ ಊಹಾಪೋಹಗಳಲ್ಲಿ ಪಾಲ್ಗೊಳ್ಳುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ನಾಗಲ್ ಅವರು ಸ್ವೀಡನ್ ವಿರುದ್ಧ ಇತ್ತೀಚೆಗೆ ನಡೆದಿದ್ದ ಡೇವಿಸ್ ಕಪ್‌ನಿಂದ ಹೊರಗುಳಿದಿದ್ದರು. ಯುಎಸ್‌ ಓಪನ್ ಪುರುಷರ ಡಬಲ್ಸ್ ಸ್ಪರ್ಧಾವಳಿಯಲ್ಲಿ ಕಾಡಿದ್ದ ಬೆನ್ನುನೋವಿನಿಂದಾಗಿ ಡೇವಿಸ್ ಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು.

Leave A Reply

Your email address will not be published.