ಹೊಸದಿಲ್ಲಿ : ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಹಾಗೂ ಗೀತಾ ಫೋಗಟ್ ಸೋಮವಾರ ಕುಸ್ತಿ ಚಾಂಪಿಯನ್ಸ್ ಸೂಪರ್ ಲೀಗ್(ಡಬ್ಲ್ಯುಸಿಎಸ್‌ಎಲ್)ರಚನೆಯ ಕುರಿತು ಘೋಷಣೆ ಮಾಡಿದ್ದಾರೆ.
ಡಬ್ಲ್ಯುಸಿಎಸ್‌ಎಲ್ ವಿಶ್ವ ದರ್ಜೆಯ ಅಂತರ್‌ರಾಷ್ಟ್ರೀಯ ಲೀಗ್ ಆಗಿದ್ದು,ಜಾಗತಿಕವಾಗಿ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಲು ನಮ್ಮ ಕುಸ್ತಿಪಟುಗಳ ಕೌಶಲ್ಯವನ್ನು ಇದು ಬಲಪಡಿಸುತ್ತದೆ. ಅತ್ಯುತ್ತಮ ಗುಣಮಟ್ಟದ ವ್ಯವಸ್ಥೆಯೊಂದಿಗೆ ಕುಸ್ತಿಪಟುಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಸಾಕ್ಷಿ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಕೂಡ ಈ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.
ಅಮನ್ ಅವರು ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರುತ್ತಿದ್ದಾರೆ. ಈ ಲೀಗ್ ಅತ್ಯಂತ ಶ್ಲಾಘನೀಯ ಉಪಕ್ರಮವಾಗಿದ್ದು, ಇದು ಭಾರತೀಯ ಕುಸ್ತಿಗೆ ಹೆಚ್ಚು ಸಹಾಯ ಮಾಡುತ್ತದೆ. ಆದ್ದರಿಂದ ನಾನು ಅದರ ಭಾಗವಾಗಲು ಹಾಗೂ ಅದನ್ನು ಸಂಪೂರ್ಣವಾಗಿ ಬೆಂಬಲಿಸಲು ಬಯಸುತ್ತೇನೆ ಎಂದು ಸಾಕ್ಷಿ ಹೇಳಿದ್ದಾರೆ.
ಭಾರತೀಯ ಕುಸ್ತಿಯ ಉದಯೋನ್ಮುಖ ಯುವ ತಾರೆಯೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು 32ರ ಹರೆಯದ ಸಾಕ್ಷಿ ಹೇಳಿದ್ದಾರೆ.
ಬಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ಜೊತೆಗೂಡಿ ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಕುಸ್ತಿಪಟುಗಳ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಸಾಕ್ಷಿ ಅವರು ಈ ವರ್ಷ ಕುಸ್ತಿಗೆ ನಿವೃತ್ತಿ ಪ್ರಕಟಿಸಿದ್ದರು.