EBM News Kannada
Leading News Portal in Kannada

ಎಐಎಫ್‌ಎಫ್‌ನಿಂದ 3 ಕೋಟಿ ರೂ. ಪರಿಹಾರ ಸ್ವೀಕರಿಸಲಿದ್ದಾರೆ ಭಾರತದ ಮಾಜಿ ಫುಟ್ಬಾಲ್ ಕೋಚ್ ಸ್ಟಿಮ್ಯಾಕ್

0


ಹೊಸದಿಲ್ಲಿ : ಭಾರತದ ಪುರುಷರ ಫುಟ್ಬಾಲ್ ತಂಡದ ಮಾಜಿ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಹಾಗೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್)ಒಪ್ಪಂದಕ್ಕೆ ಬಂದಿದ್ದು ತನ್ನನ್ನು ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಪರಿಹಾರವಾಗಿ 400,000 ಯು.ಎಸ್. ಡಾಲರ್(ಅಂದಾಜು 3.36 ಕೋಟಿ ರೂ.)ಸ್ವೀಕರಿಸಲು ಸ್ಟಿಮ್ಯಾಕ್ ನಿರ್ಧರಿಸಿದ್ದಾರೆ.

ತುಲನಾತ್ಮಕವಾಗಿ ಸುಲಭ ತಂಡಗಳಿರುವ ಗುಂಪಿನಲ್ಲಿದ್ದರೂ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳ ಎರಡನೇ ಸುತ್ತಿನಲ್ಲಿ ಭಾರತವು ನಿರ್ಗಮಿಸಿರುವ ಕಾರಣ ಒಂದು ವರ್ಷ ಮೊದಲೇ ಜೂನ್‌ನಲ್ಲಿ ಎಐಎಫ್‌ಎಫ್, ಸ್ಟಿಮ್ಯಾಕ್ ಅವರನ್ನು ವಜಾಗೊಳಿಸಿತ್ತು.

ವಜಾಗೊಂಡ ನಂತರ ಸ್ಟಿಮ್ಯಾಕ್ ಹಾಗೂ ಎಐಎಫ್‌ಎಫ್ ನಡುವೆ ವಾಗ್ವಾದ ನಡೆದಿದ್ದು, ಕ್ರೊಯೇಶಿಯದ ಸ್ಟಿಮ್ಯಾಕ್ ಅವರು 10 ದಿನಗಳಲ್ಲಿ ತನ್ನ ಬಾಕಿ ಮೊತ್ತವನ್ನು ಪಾವತಿಸದಿದ್ದರೆ ಫೆಡರೇಶನ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಇದೀಗ ಎರಡೂ ಕಡೆಯವರು ಒಪ್ಪಂದಕ್ಕೆ ಬಂದಿದ್ದಾರೆ.

ಎಐಎಫ್‌ಎಫ್‌ನೊಂದಿಗಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು 400,000 ಯು.ಎಸ್. ಡಾಲರ್ ಪರಿಹಾರ ಪಾವತಿಸಲು ಎಐಎಫ್‌ಎಫ್ ಉನ್ನತ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಇದಕ್ಕೂ ಮೊದಲು ಎಐಎಫ್‌ಎಫ್, ಸ್ಟಿಮ್ಯಾಕ್‌ರನ್ನು ಉಚ್ಚಾಟಿಸಿದ್ದಕ್ಕೆ ಪರಿಹಾರವಾಗಿ ಮೂರು ತಿಂಗಳ ಸಂಭಾವನೆ ನೀಡುವ ಆಫರ್ ನೀಡಿತ್ತು. ಆದರೆ ಸ್ಟಿಮ್ಯಾಕ್ ಇದನ್ನು ನಿರಾಕರಿಸಿದ್ದರು. ಕಳೆದ ತಿಂಗಳು ಫಿಫಾದ ಮೊರೆ ಹೋಗಿದ್ದ ಸ್ಟಿಮ್ಯಾಕ್ ಅವರು ಎಐಎಫ್‌ಎಫ್‌ನಿಂದ ಎರಡು ವರ್ಷದ ವೇತನ 920,000 ಡಾಲರ್(ಅಂದಾಜು 7.72 ಕೋ.ರೂ.)ಬರಬೇಕಾಗಿದೆ ಎಂದು ದೂರು ನೀಡಿದ್ದರು.

59ರ ಹರೆಯದ ಸ್ಟಿಮ್ಯಾಕ್ 2019ರಲ್ಲಿ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದು, ಕಳೆದ ಅಕ್ಟೋಬರ್‌ನಲ್ಲಿ ಎಐಎಫ್‌ಎಫ್, 2026ರ ತನಕ ಕೋಚ್ ಅವಧಿಯನ್ನು ವಿಸ್ತರಿಸಿತ್ತು..

ಏಶ್ಯಕಪ್‌ನಲ್ಲಿ ಒಂದು ವೇಳೆ ಫುಟ್ಬಾಲ್ ತಂಡವು ಕ್ವಾರ್ಟರ್ ಫೈನಲ್‌ಗೆ ತಲುಪಿದರೆ ಕೋಚ್ ಅವಧಿ ವಿಸ್ತರಿಸಲಾಗುತ್ತದೆ ಎಂದು ಸ್ಟಿಮ್ಯಾಕ್‌ಗೆ ಷರತ್ತು ವಿಧಿಸಲಾಗಿತ್ತು. ಆದರೆ ಭಾರತ ಈ ತನಕ ಈ ಸಾಧನೆ ಮಾಡಿಲ್ಲ. 2011 ಹಾಗೂ 2015ರ ಆವೃತ್ತಿಯ ಏಶ್ಯಕಪ್‌ನಲ್ಲಿ ಭಾಗವಹಿಸಿದ್ದ ಭಾರತವು ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿತ್ತು.

ಮನೋಲೊ ಮಾರ್ಕ್ವೆಝ್ ಅವರು ಸ್ಟಿಮ್ಯಾಕ್ ಬದಲಿಗೆ ಭಾರತೀಯ ಪುರುಷರ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

Leave A Reply

Your email address will not be published.