ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಸಿಹಿಸುದ್ದಿ; 2 ಸಾವಿರ ವಿಶೇಷ ಭತ್ಯೆ ಘೋಷಣೆ
ನವದೆಹಲಿ(ಏ.28): ಕೊರೋನಾ ವೈರಸ್ನಿಂದ ದೇಶದ ಜನರನ್ನು ಪಾರು ಮಾಡಲು ವೈದ್ಯರು ಮತ್ತು ಪೊಲೀಸರಂತೆಯೇ ಹಗಲು ರಾತ್ರಿಯೆನ್ನದೇ ಕೆಲಸದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ವಿಶೇಷ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಆಶಾ ಕಾರ್ಯಕರ್ತರಿಗೆ ವಿಶೇಷ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ತಲಾ 2 ಸಾವಿರ ನೀಡುವುದಾಗಿ ಘೋಷಿಸಿದೆ. ಈ ವರ್ಷ ಜನವರಿ 1ನೇ ತಾರೀಕಿನಿಂದ ಮುಂದಿನ ಜುಲೈ 20ನೇ ತಾರೀಕಿನವರೆಗೂ ಆಯಾ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತರಿಗೆ 2 ಸಾವಿರ ರೂ. ವಿಶೇಷ ಭತ್ಯೆ ನೀಡಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.