ಟ್ರಂಪ್ ಆರ್ಥಿಕ ಸಲಹೆಗಾರರ ಪಟ್ಟಿಯಲ್ಲಿ ಗೂಗಲ್ನ ಪಿಚೈ ಮತ್ತು ಮೈಕ್ರೋಸಾಫ್ಟ್ ನಾಡೆಲ್ಲಾ ಸೇರಿದಂತೆ 6 ಭಾರತೀಯರು
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೂಗಲ್ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್ನ ಸತ್ಯ ನಾಡೆಲ್ಲಾ ಸೇರಿದಂತೆ ಆರು ಭಾರತೀಯ-ಅಮೆರಿಕನ್ ಕಾರ್ಪೊರೇಟ್ ನಾಯಕರನ್ನು ಕೊರೋನಾ ವೈರಸ್ನಿಂದ ಹಾನಿಗೊಳಗಾದ ಅಮೆರಿಕದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ರಚಿಸಲಾದ ತನ್ನ ಗ್ರೇಟ್ ಅಮೆರಿಕನ್ ಎಕನಾಮಿಕ್ ರಿವೈವಲ್ ಇಂಡಸ್ಟ್ರಿ ಗ್ರೂಪ್ನಲ್ಲಿ ಸೇರಿಸಿದ್ದಾರೆ.
ಟ್ರಂಪ್ ವಿವಿಧ ಕೈಗಾರಿಕೆಗಳು ಮತ್ತು ವಿಭಾಗಗಳಿಂದ 200 ಕ್ಕೂ ಹೆಚ್ಚು ಉನ್ನತ ಅಮೆರಿಕನ್ ನಾಯಕರನ್ನು ಆಯ್ಕೆ ಮಾಡಿ ತಂಡವನ್ನು ರಚಿಸಿದ್ದಾರೆ. ಕೆಲವೇ ವಾರಗಳಲ್ಲಿ ಆರ್ಥಿಕ ಉಬ್ಬರವನ್ನು ಅನುಭವಿಸುತ್ತಿರುವ ಅಮೆರಿಕದ ಆರ್ಥಿಕತೆಯನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂಬುದರ ಕುರಿತು ಸಲಹೆಗಳನ್ನು ಆ ತಂಡದ ಸದಸ್ಯರು ನೀಡುತ್ತಾರೆ.
ತಂಡದಲ್ಲಿರುವವವರು ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆ ಮತ್ತು ಅವರು ನಮಗೆ ಕೆಲವು ವಿಚಾರಗಳಲ್ಲಿ ಸಲಹೆ ನೀಡಲಿದ್ದಾರೆ ಎಂದು ಟ್ರಂಪ್ ಮಂಗಳವಾರ ತಮ್ಮ ದೈನಂದಿನ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ವರದಿಗಾರರಿಗೆ ಹೇಳಿದರು.
ಪಿಚೈ ಮತ್ತು ನಾಡೆಲ್ಲಾ ಜೊತೆಗೆ, ಐಬಿಎಂನ ಅರವಿಂದ ಕೃಷ್ಣ ಮತ್ತು ಮೈಕ್ರಾನ್ ಅವರ ಸಂಜಯ್ ಮೆಹ್ರೋತ್ರಾ ಅವರನ್ನು ಟೆಕ್ ಗ್ರೂಪ್ಗೆ ಹೆಸರಿಸಿದ್ದಾರೆ. ಇನ್ನೂ ಆಪಲ್ನ ಟಿಮ್ ಕುಕ್, ಒರಾಕಲ್ನ ಲ್ಯಾರಿ ಎಲಿಸನ್ ಮತ್ತು ಫೇಸ್ಬುಕ್ನ ಮಾರ್ಕ್ ಜೂಕರ್ಬರ್ಗ್ ಈ ಗುಂಪಿನ ಇತರ ಸದಸ್ಯರು.
ಪೆರ್ನೋಡ್ ರಿಕಾರ್ಡ್ನ ಭಾರತೀಯ-ಅಮೇರಿಕನ್ ಆನ್ ಮುಖರ್ಜಿ ಅವರನ್ನು ಉತ್ಪಾದನಾ ಗುಂಪಿಗೆ ಹೆಸರಿಸಲಾಗಿದೆ, ಇದರಲ್ಲಿ ಕ್ಯಾಟರ್ಪಿಲ್ಲರ್ನ ಜಿಮ್ ಅಂಪಲ್ಬಿ, ಟೆಸ್ಲಾದ ಎಲೋನ್ ಮಸ್ಕ್, ಫಿಯೆಟ್ ಕ್ರಿಸ್ಲರ್ನ ಮೈಕ್ ಮ್ಯಾನ್ಲೆ, ಫೋರ್ಡ್ನ ಬಿಲ್ ಫೋರ್ಡ್ ಮತ್ತು ಜನರಲ್ ಮೇರಿ ಬಾರ್ರಾ ಕೂಡ ಇದ್ದಾರೆ.
ಮಾಸ್ಟರ್ಕಾರ್ಡ್ನ ಅಜಯ್ ಬಂಗಾ ಅವರನ್ನು ಫೈನಾನ್ಷಿಯಲ್ ಸರ್ವೀಸಸ್ ಗ್ರೂಪ್ಗೆ ಹೆಸರಿಸಲಾಗಿದ್ದು, ಅದರಲ್ಲಿ ವೀಸಾದ ಅಲ್ ಕೆಲ್ಲಿ, ಬ್ಲಾಕ್ಸ್ಟೋನ್ನ ಸ್ಟೀಫನ್ ಶ್ವಾರ್ಜ್ಮನ್; ಫಿಡೆಲಿಟಿ ಇನ್ವೆಸ್ಟ್ಮೆಂಡ್ನ ಅಬಿಗೈಲ್ ಜಾನ್ಸನ್ ಮತ್ತು ಇಂಟ್ಯೂಟ್ಸ್ನ ಸಾಸನ್ ಗುಡಾರ್ಝಿ ಇದ್ದಾರೆ.
ಟ್ರಂಪ್ ರಚಿಸಿದ ವಿವಿಧ ಗುಂಪುಗಳೆಂದರೆ ಕೃಷಿ, ಬ್ಯಾಂಕಿಂಗ್, ನಿರ್ಮಾಣ, ಕಾರ್ಮಿಕ ಕಾರ್ಯಪಡೆ, ರಕ್ಷಣಾ, ಇಂಧನ, ಹಣಕಾಸು ಸೇವೆಗಳು, ಆಹಾರ ಮತ್ತು ಪಾನೀಯಗಳು, ಆರೋಗ್ಯ ರಕ್ಷಣೆ, ಆತಿಥ್ಯ, ಉತ್ಪಾದನೆ, ರಿಯಲ್ ಎಸ್ಟೇಟ್, ಚಿಲ್ಲರೆ ವ್ಯಾಪಾರ, ತಂತ್ರಜ್ಞಾನ, ದೂರಸಂಪರ್ಕ, ಸಾರಿಗೆ, ಕ್ರೀಡೆ.ಈ ಗುಂಪುಗಳು ಶ್ವೇತಭವನದೊಂದಿಗೆ ಒಟ್ಟಾಗಿ ಕೆಲಸ ಮಾಡಲಿದ್ದು, ಅಮೇರಿಕನ್ ಆರ್ಥಿಕತೆಯನ್ನು ಸಮೃದ್ಧಿಯ ಭವಿಷ್ಯದತ್ತ ಕರೆದುಕೊಂಡು ಹೋಗುತ್ತದೆ ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕದ ಆರೋಗ್ಯ ಮತ್ತು ಸಂಪತ್ತು ಪ್ರಾಥಮಿಕ ಗುರಿಯಾಗಿದೆ, ಮತ್ತು ಈ ಗುಂಪುಗಳು ಹೆಚ್ಚು ಸ್ವತಂತ್ರ, ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುತ್ತದೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.