ಮೈಸೂರಿನಲ್ಲಿ ಇಂದು ಮತ್ತೆ ಐದು ಕೊರೋನಾ ಪ್ರಕರಣ ಪತ್ತೆ; ಜ್ಯುಬಿಲೆಂಟ್ ಕಾರ್ಖಾನೆಗೆ ಲೀಗಲ್ ನೋಟೀಸ್
ಮೈಸೂರು: ಜಿಲ್ಲೆಯಲ್ಲಿ ಇಂದು ಮತ್ತೆ ಐದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 5 ಮಂದಿಯೂ ಜುಬಿಲೆಂಟ್ಸ್ ಕಾರ್ಖಾನೆ ನೌಕರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಂಜನಗೂಡು ಜ್ಯುಬಿಲೆಂಟ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎರಡು ಗ್ರಾಮಗಳಲ್ಲಿ ಸೀಲ್ಡ್‌ಡೌನ್‌ಗೆ ಆದೇಶ ಮಾಡಲಾಗಿದೆ. ಹೆಬ್ಯಾ, ಸೋಮೇಶ್ವರ ಗ್ರಾಮಗಳು ಸೀಲ್ ಡೌನ್ ಆಗಿವೆ. ಮೈಸೂರಿನ ಜೆಪಿ ನಗರ, ಶ್ರೀರಾಂಪುರದ ಎರಡು ಮನೆಗಳ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಜ್ಯುಬಿಲೆಂಟ್ ಕಾರ್ಖಾನೆ ಸೋಂಕು ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಐದು ಸೋಂಕು ಪತ್ತೆಯಾಗುವ ಮೂಲಕ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಚಿಕಿತ್ಸೆಯಲ್ಲಿರುವ ಕೆಲವರು ಗುಣಮುಖರಾಗುತ್ತಿದ್ದಾರೆ. ಸಂಜೆ ವೇಳೆಗೆ ಗುಣಮುಖರಾದ ಕೆಲವರು ಡಿಸ್ಚಾರ್ಜ್ ಆಗಲಿದ್ದಾರೆ. ಕಾರ್ಖಾನೆ ನೌಕರರ ಸ್ಯಾಂಪಲ್ ಟೆಸ್ಟಿಂಗ್ ಶೇ 85 ರಷ್ಟು ಮುಗಿದಿದೆ. ಮೈಸೂರು ಮಂದಿಯ ಸ್ಯಾಂಪಲ್ ಟೆಸ್ಟಿಂಗ್ ತ್ವರಿತಗತಿಗೆ ಬೆಂಗಳೂರಿನಲ್ಲೂ ಟೆಸ್ಟಿಂಗ್ ನಡೆಸಲಾಗುತ್ತಿದೆ. ವೈರಸ್ ಖಾತ್ರಿ ತಿಳಿಯಲು ತ್ವರಿತಗತಿಯಲ್ಲಿ ಟೆಸ್ಟಿಂಗ್ ಕಾರ್ಯ ನಡೆಸಲಾಗುತ್ತಿದೆ. ಎಲ್ಲವು ನಮ್ಮ ನಿಯಂತ್ರಣದಲ್ಲಿದೆ ಎಂದು ಮೈಸೂರು ಡಿಸಿ ಅಭಿರಾಮ್ ಜಿ.ಶಂಕರ್ ಹೇಳಿದರು.