ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿಸಿ, 5 ಕೋಟಿ ರೂ. ಆದಾಯ ಗಳಿಸಿ
ನವದೆಹಲಿ: ಬೇನಾಮಿ ಆಸ್ತಿ , ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸೂಕ್ತ ಮಾಹಿತಿ ನೀಡಿದ್ದರೆ, ಒಂದು ಕೋಟಿ ರೂಪಾಯಿ ಆದಾಯ ಗಳಿಸಬಹುದಾಗಿದೆ. ಅಲ್ಲದೇ ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದರೆ, 5 ಕೋಟಿ ಆದಾಯ ಗಳಿಸಬಹುದಾಗಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಭಾರತದಲ್ಲಿ ಆದಾಯ ಅಥವಾ ಆಸ್ತಿಗಳ ಮೇಲೆ ತೆರಿಗೆ ಗಣನೀಯವಾಗಿ ತಪ್ಪಿಸಿಕೊಳ್ಳುವುದು ತಡೆಯಲು ಮಾಹಿತಿ ನೀಡುವವರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡುವ ಆದಾಯ ತೆರಿಗೆ ಮಾಹಿತಿ ಪುರಸ್ಕಾರ ಯೋಜನೆಗೆ ತಿದ್ದುಪಡಿ ತರಲಾಗಿದೆ.
ಬೇನಾಮಿ ವ್ಯವಹಾರ ಮಾಹಿತಿ ಪುರಸ್ಕಾರ ಯೋಜನೆ 2018ರ ಅಡಿಯಲ್ಲಿ ವಿದೇಶಿಗರು ಸೇರಿದಂತೆ ಯಾವುದೇ ವ್ಯಕ್ತಿ, ಬೆನಾಮಿ ಆಸ್ತಿ, ವ್ಯವಹಾರದ ಬಗ್ಗೆ ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ.
ಬೇನಾಮಿ ಆಸ್ತಿ ವ್ಯವಹಾರದ ಬಗ್ಗೆ ಜನರು ಮಾಹಿತಿ ನೀಡುವುದನ್ನು ಪ್ರೋತ್ಸಾಹಿಸುವುದು ಪುರಸ್ಕಾರ ಯೋಜನೆಯ ಉದ್ದೇಶವಾಗಿದೆ. ಅಂತಹ ಆಸ್ತಿಗಳಿಂದ ಆದಾಯ ಗಳಿಸಬಹುದಾಗಿದೆ ಹೇಳಲಾಗಿದೆ.
ಬೇನಾಮಿ ವ್ಯವಹಾರ ಮಾಹಿತಿ ಪುರಸ್ಕಾರ ಯೋಜನೆ-2018ರ ಅಡಿಯಲ್ಲಿ ಬೇನಾಮಿ ಆಸ್ತಿ, ವ್ಯವಹಾರದ ಬಗ್ಗೆ ಸೂಕ್ತ ಮಾಹಿತಿ ನೀಡುವ ವ್ಯಕ್ತಿಗೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು , ಅಂತಹ ಆಸ್ತಿಗಳನ್ನು ಬೇನಾಮಿ ವ್ಯವಹಾರ ( ನಿರ್ಬಂಧ) ತಿದ್ದುಪಡಿ ಕಾಯ್ದೆ 2016ರ ಪ್ರಕಾರ ಹರಾಜು ಹಾಕಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ, ಬಹುಮಾನ ಯೋಜನೆಯನ್ನು ಗೌಪ್ಯವಾಗಿಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಭರವಸೆ ನೀಡಿದೆ.
ವಿದೇಶದಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದ್ದರೆ, ಅತಿ ಹೆಚ್ಚಿನ 5 ಕೋಟಿ ಬಹುಮಾನ ನೀಡಲಾಗುವುದು, ಕಪ್ಪು ಹಣ ಹೊಂದಿದ್ದ ಪಕ್ಷದಲ್ಲಿ 2015ರ ತೆರಿಗೆ ಕಾಯ್ದೆ ಪ್ರಕಾರ ವಿದೇಶದಲ್ಲಿರುವ ಆದಾಯ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.