ಮುಂಬೈ: ಗ್ಯಾಂಗ್ ಸ್ಟರ್ ಗಳಾದ ಅನ್ಮೋಲ್ ಬಿಷ್ಣೋಯಿ, ಶುಭಂ ಲೋಂಕರ್ ಹಾಗೂ ಯಾಸಿನ್ ಅಖ್ತರ್ ವಿರುದ್ಧ ಬುಧವಾರ ವಿಶೇಷ ನ್ಯಾಯಾಲಯವು ಮಾಜಿ ಶಾಸಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತ ವಾರೆಂಟ್ ಜಾರಿಗೊಳಿಸಿದೆ. ಅವರು ಈ ಅಪರಾಧ ಕೃತ್ಯದಲ್ಲಿ ಪ್ರಮುಖ ಪಾತ್ರವ ವಹಿಸಿರುವುದು ಹಾಗೂ ತನಿಖಾ ಸಂಸ್ಥೆಗಳು ಹಲವು ಪ್ರಯತ್ನಗಳನ್ನು ನಡೆಸಿದರೂ ಪತ್ತೆ ಮಾಡಲಾಗದಿರುವುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.
ನ್ಯಾಯಾಲಯದ ಮೊರೆ ಹೋದ ಪ್ರಾಸಿಕ್ಯೂಷನ್, ಅವರ ವಿರುದ್ಧ ವಾರೆಂಟ್ ಗಳಿಗಾಗಿ ಮನವಿ ಮಾಡಿತು. 66 ವರ್ಷದ ಬಾಬಾ ಸಿದ್ದೀಕಿ ಅವರನ್ನು ಅಕ್ಟೋಬರ್ 12ರಂದು ಬಾಂದ್ರಾದಲ್ಲಿರುವ ಅವರ ಪುತ್ರ ಝೀಶನ್ ಸಿದ್ದೀಕಿಯ ಕಚೇರಿ ಎದುರು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಶಂಕಿತರನ್ನು ಬಂಧಿಸಲಾಗಿದ್ದು, ಈ ಗುಂಪನ್ನು ಮುನ್ನಡೆಸಿರುವ ಲಾರೆನ್ಸ್ ಬಿಷ್ಣೋಯಿ, ಹತ್ಯೆಗೆ ಆದೇಶಿಸಿದ್ದ ಎಂದು ಕಳೆದ ವಾರ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.
ಈ ಹತ್ಯೆ ನಡೆಸುವಂತೆ ಆರೋಪಿಗಳಿಗೆ ಸ್ನ್ಯಾಪ್ ಚಾಟ್ ಮೂಲಕ ನಿರ್ದೇಶಿಸಿರುವ ಲಾರೆನ್ಸ್ ಬಿಷ್ಣೋಯಿ, ಆರೋಪಿಗಳಿಗೆ ಆರ್ಥಿಕ ನೆರವನ್ನೂ ಒದಗಿಸಿದ್ದ ಎಂದು ಸಾರ್ವಜನಿಕ ಅಭಿಯೋಜಕ ವಜೀದ್ ಶೇಖ್ ವಾದಿಸಿದರು. ಇದಕ್ಕೂ ಮುನ್ನ ನಟ ಸಲ್ಮಾನ್ ಖಾನ್ ನಿವಾಸದೆದುರು ನಡೆದಿದ್ದ ಗುಂಡಿನ ದಾಳಿ ಘಟನೆಯ ಸಂಬಂಧ ಅಮೆರಿಕಕ್ಕೆ ಲಾರೆನ್ಸ್ ಬಿಷ್ಣೋಯಿ ಗಡೀಪಾರಿಗೆ ಕೋರಿ ಮನವಿಯನ್ನೂ ರವಾನಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿತು.
ಪ್ರಾಸಿಕ್ಯೂಷನ್ ವಾದವನ್ನು ಆಲಿಸಿದ ನಂತರ, ಅರ್ಜಿಯನ್ನು ಸ್ವೀಕರಿಸಲು ಅನುಮತಿ ನೀಡಿದ ನ್ಯಾಯಾಲಯವು, ಮೂವರು ಆರೋಪಿಗಳು ಈ ಅಪರಾಧ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿತು.