ಪ್ರಯಾಗ್‌ರಾಜ್: ಮಹಾಕುಂಭ ಮೇಳದ ಅಖಾರಾಮಾರ್ಗದಲ್ಲಿ ಬುಧವಾರ ನಸುಕಿನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 45 ದಿನಗಳ ಕುಂಭ ಮೇಳದ ಅತ್ಯಂತ ಪವಿತ್ರ ದಿನ ಎನಿಸಿದ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಸಂಗಮಕ್ಷೇತ್ರದಲ್ಲಿ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲು ಉಂಟಾದಾಗ ಈ ದುರಂತ ಸಂಭವಿಸಿತ್ತು.
ಭದ್ರತಾ ದೃಷ್ಟಿಯಿಂದ ಅಳವಡಿಸಿದ್ದ ಬ್ಯಾರಿಕೇಡ್ ಗಳು ಕುಸಿದು ಬಿದ್ದು, ದ್ವಾರಮಾರ್ಗ ತೆರೆದುಕೊಂಡ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆ ಕಾಲ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು. ಮಧ್ಯರಾತ್ರಿ ಬಳಿಕ 1 ರಿಂದ 2 ಗಂಟೆಯವರೆಗೆ ಜನದಟ್ಟಣೆಯನ್ನು ನಿಭಾಯಿಸುವುದು ಮರೀಚಿಕೆಯಾಯಿತು. ಮೌನಿ ಅಮಾವಾಸ್ಯೆ ಹಾಗೂ ಮುನ್ನಾ ದಿನ ಸುಮಾರು 12 ಕೋಟಿ ಭಕ್ತರು ಪುಣ್ಯಸ್ನಾನಕ್ಕೆ ಧಾವಿಸಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ಮಂಗಳವಾರ ತಡರಾತ್ರಿವರೆಗೆ ಸುಮಾರು 5.5 ಕೋಟಿ ಭಕ್ತರು ಪುಣ್ಯಸ್ನಾನ ಕೈಗೊಂಡಿದ್ದು, ರಾತ್ರಿ ಜನದಟ್ಟಣೆ ಮತ್ತಷ್ಟು ಹೆಚ್ಚಿತು ಎಂದು ಅಧಿಕೃತ ಮೂಲಗಳು ಹೇಳಿವೆ.
ಕೆಲ ಮಂದಿ ಬ್ಯಾರಿಕೇಡ್ ಗಳನ್ನು ಏರಿ ಸಂಗಮ ಕ್ಷೇತ್ರವನ್ನು ತಲುಪಲು ಪ್ರಯತ್ನಿಸಿದಾಗ ಬ್ಯಾರಿಕೇಡ್ ಗಳು ಕುಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯ ಗುಂಪು ಸಂಗಮ ಕ್ಷೇತ್ರದತ್ತ ನುಗ್ಗುವ ಪ್ರಯತ್ನ ಮಾಡಿತು. ಪುಣ್ಯಕ್ಷಣ ಎನ್ನಲಾಗುವ ಬ್ರಾಹ್ಮೀ ಮುಹೂರ್ತಕ್ಕಾಗಿ ಬ್ಯಾರಿಕೇಡ್ ಗಳ ಇಕ್ಕೆಲಗಳಲ್ಲಿ ಕಾಯುತ್ತಾ ಕುಳಿತಿದ್ದ ಹಾಗೂ ಮಲಗಿದ್ದವರ ಮೇಲೆ ಜನರು ಗುಂಪಾಗಿ ಹಾದುಹೋಗುವ ಸಂದರ್ಭ ಕಾಲ್ತುಳಿತ ಉಂಟಾಯಿತು.
ರಾತ್ರಿಯ ನೀರವ ಮೌನದಲ್ಲಿ ಆ್ಯಂಬುಲೆನ್ಸ್ ವಾಹನಗಳ ಸೈರನ್ ಮೊಳಗಲಾರಂಭಿಸಿತು. ಭದ್ರತಾ ಸಿಬ್ಬಂದಿ ಮತ್ತು ಪರಿಹಾರ ಕಾರ್ಯಕರ್ತರು ನಿಂತಿದ್ದ ವಾಹನಗಳಿಗೆ ಹಲವು ಮಂದಿಯನ್ನು ಸ್ಟ್ರೆಚರ್ ಗಳಲ್ಲಿ ಹೊತ್ತೊಯ್ಯುತ್ತಿದ್ದ ದೃಶ್ಯ ಕಂಡುಬಂದಿದೆ. ಹೊದಿಕೆ, ಬ್ಯಾಗ್ ಗಳು ಮತ್ತು ಚಪ್ಪಲಿಗಳು ಘಟನಾ ಸ್ಥಳದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದದ್ದು ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ.