ಹೊಸದಿಲ್ಲಿ: 1991ರ ಮುಸ್ಲಿಮ್ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ಉಲ್ಲಂಘಿಸಿ ಪತ್ನಿಗೆ ವಿಚ್ಛೇದನ ನೀಡಲು ತ್ವರಿತ ತ್ರಿವಳಿ ತಲಾಖ್ ಹೇಳಿದ್ದಕ್ಕಾಗಿ ಪುರುಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು ಮತ್ತು ಸಲ್ಲಿಕೆಯಾಗಿರುವ ಆರೋಪಪಟ್ಟಿಗಳ ಸಂಖ್ಯೆ ಕುರಿತು ವಿವರಗಳನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ಸೂಚಿಸಿದೆ.
ಕಾಯ್ದೆಯು ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವ ಅರ್ಜಿದಾರರು, ತ್ರಿವಳಿ ತಲಾಖ್‌ನ ಅಪರಾಧೀಕರಣವು ಗಂಭೀರ ಸಾರ್ವಜನಿಕ ಕಿರುಕುಳವನ್ನು ಸೃಷ್ಟಿಸಬಹುದು ಹಾಗೂ ಸಮಾಜದಲ್ಲಿ ಧ್ರುವೀಕರಣ ಮತ್ತು ಅಸಾಮರಸ್ಯಕ್ಕೆ ಕಾರಣವಾಗಬಹುದು ಎಂದು ಪ್ರತಿಪಾದಿಸಿದ್ದಾರೆ.
1991ರ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ 12 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾ.ಸಂಜಯ ಕುಮಾರ ಅವರ ಪೀಠವು,ಲಿಖಿತ ಉತ್ತರಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಇತರರಿಗೆ ಸೂಚಿಸಿತು.
ಅಂತಿಮ ವಿಚಾರಣೆಯನ್ನು ಮಾರ್ಚ್ 17ರಿಂದ ಆರಂಭಗೊಳ್ಳುವ ವಾರಕ್ಕೆ ನಿಗದಿಗೊಳಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ಪ್ರಕರಣಕ್ಕೆ ‘ಮುಸ್ಲಿಮ್ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2019ಕ್ಕೆ ಸವಾಲು’ ಎಂದು ಮರುನಾಮಕರಣ ಮಾಡಿದ್ದು, 2019ರ ಕಾಯ್ದೆಯ ಕಲಂ 3 ಮತ್ತು 4ರಡಿ ಬಾಕಿಯುಳಿದಿರುವ ಒಟ್ಟು ಪ್ರಕರಣಗಳ ಸಂಖ್ಯೆ ಕುರಿತು ವಿವರಗಳನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ದತ್ತಾಂಶಗಳನ್ನೂ ಒದಗಿಸುವಂತೆ ಅದು ತಿಳಿಸಿದೆ.
ಅರ್ಜಿದಾರರ ಪರ ವಕೀಲ ನಿಝಾಮ್ ಪಾಷಾ ಅವರು,ಕೇವಲ ಪದಗಳ ಉಚ್ಚಾರಣೆಯನ್ನು (ಮೂರು ಬಾರಿ ತಲಾಖ್) ಅಪರಾಧವೆಂದು ಪರಿಗಣಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ತ್ರವಳಿ ತಲಾಖ್‌ನ್ನು ದಂಡನೀಯವಾಗಿಸಲು ಪ್ರತ್ಯೇಕ ಕ್ರಿಮಿನಲ್ ಕಾನೂನು ಅನಗತ್ಯವಾಗಿತ್ತು ಎಂದು ಹೇಳಿದ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಆರ್.ಶಂಶಾದ್ ಅವರು,ವೈವಾಹಿಕ ಪ್ರಕರಣಗಳಲ್ಲಿ ಪತ್ನಿಗೆ ಥಳಿಸಿದರೂ ಸಹ ಎಫ್‌ಐಆರ್ ದಾಖಲಾಗಲು ತಿಂಗಳುಗಳೇ ಬೇಕಾಗುತ್ತವೆ. ಇಲ್ಲಿ ಕೇವಲ ಉಚ್ಚಾರಣೆಗಾಗಿ ಎಫ್‌ಐಆರ್ ದಾಖಲಾಗಿದೆ ಎಂದರು.
ಮುಸ್ಲಿಮ್ ಗಂಡಂದಿರನ್ನು ದಂಡಿಸುವುದು ನೂತನ ಕಾನೂನಿನ ಏಕೈಕ ಉದ್ದೇಶವಾಗಿದೆ ಎಂದು ಅರ್ಜಿದಾರರು ವಾದಿಸಿದರು.
ತಾರತಮ್ಯದ ಪರಿಪಾಠವನ್ನು ದಂಡಿಸುವುದು ಸಂಪೂರ್ಣವಾಗಿ ಶಾಸಕಾಂಗ ನೀತಿಯ ವ್ಯಾಪ್ತಿಯಲ್ಲಿದೆ ಎಂದು ಹೇಳಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿರುವ ಇತರ ಹಲವಾರು ಕಾನೂನುಗಳು ಹೆಚ್ಚಿನ ಶಿಕ್ಷೆಯನ್ನು ಸೂಚಿಸಿದೆ,ಆದರೆ ಇಲ್ಲಿ ಶಿಕ್ಷೆಯ ಗರಿಷ್ಠ ಅವಧಿ ಕೇವಲ ಮೂರು ವರ್ಷಗಳಾಗಿವೆ ಎಂದು ಪ್ರತಿಪಾದಿಸಿದರು.
ಮೆಹ್ತಾರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರು ತ್ರಿವಳಿ ತಲಾಖ್‌ನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಈ ಪದ್ಧತಿಯನ್ನು ನಿಷೇಧಿಸಲಾಗಿದೆ ಮತ್ತು ತಲಾಖ್ ಪದವನ್ನು ಒಂದೇ ಬಾರಿಗೆ ಮೂರು ಸಲ ಉಚ್ಚರಿಸುವುದರಿಂದ ವಿಚ್ಛೇದನವಾಗುವುದಿಲ್ಲ. ಹೀಗಿರುವಾಗ ಅದನ್ನು ಅಪರಾಧೀಕರಿಸಬಹುದೇ ಎಂದು ಅರ್ಜಿದಾರರ ಪರ ವಕೀಲರು ಕೇಳುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಾಲಯವು ದತ್ತಾಂಶಗಳನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರಕಾರವು ಉತ್ತರವನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಕೋಝಿಕ್ಕೋಡ್ ಮೂಲದ ಮುಸ್ಲಿಮ್ ಸಂಘಟನೆ ಸಮಸ್ತ ಕೇರಳ ಜಮೀಯುತುಲ್ ಉಲೆಮಾ ಪ್ರಕರಣದಲ್ಲಿ ಮುಖ್ಯ ಅರ್ಜಿದಾರನಾಗಿದೆ.