ಹೊಸದಿಲ್ಲಿ: ನಿರ್ದಿಷ್ಟ ಉಕ್ಕು, ಐಷಾರಾಮಿ ಮೋಟಾರ್ ಸೈಕಲ್‌ಗಳು ಹಾಗೂ ಇಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಅಮೆರಿಕದ ದುಬಾರಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಭಾರತವು ಪರಿಶೀಲಿಸುತ್ತಿರುವುದಾಗಿ ಆಂಗ್ಲ ವಿತ್ತೀಯ ಸುದ್ದಿಜಾಲತಾಣ ಎನ್‌ಡಿಟಿವಿ ಪ್ರಾಫಿಟ್ ತಿಳಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಈ ನಿರ್ಧಾರವನ್ನು ಘೋಷಿಸುವ ಸಾಧ್ಯತೆಯಿದೆ. ಆದಾಗ್ಯೂ ಕೇಂದ್ರ ಸರಕಾರದ ಈ ನಿರ್ಧಾರವು ಭಾರತೀಯ ಕೈಗಾರಿಕೆಗಳ ಮೇಲೆ ಗಣನೀಯ ಪರಿಣಾಮ ಬೀರಲಾರದು ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ 20 ಸಾಮಾಗ್ರಿಗಳ ಮೇಲೆ ಶೇ.100ಕ್ಕೂ ಅಧಿಕ ಆಮದು ತೆರಿಗೆಗಳನ್ನು ವಿಧಿಸುತ್ತಿದೆ.
ಭಾರತ, ಚೀನಾ ಹಾಗೂ ಬ್ರೆಝಿಲ್ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ಅತ್ಯಧಿಕ ತೆರಿಗೆಯನ್ನು ವಿಧಿಸುವ ರಾಷ್ಟ್ರಗಳೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ ಮರುದಿನವೇ ಕೇಂದ್ರ ಸರಕಾರವು ಅಮೆರಿಕ ಉತ್ಪನ್ನಗಳಿಗೆ ತೆರಿಗೆಯನ್ನು ಕಡಿತಗೊಳಿಸುವ ಸುಳಿವನ್ನು ನೀಡಿದೆ.