ದಿಲ್ಲಿ ವಿಧಾನಸಭಾ ಚುನಾವಣೆ | ಕೇಜ್ರಿವಾಲ್ ಮೀಸಲಾತಿಯನ್ನು ವಿರೋಧಿಸಿದ್ದರು: ರಾಹುಲ್ ಗಾಂಧಿ | Delhi Assembly Elections 2025
ಹೊಸದಿಲ್ಲಿ: ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧದ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಾಹುಲ್ ಗಾಂಧಿ, ಅವರು ಮೀಸಲಾತಿಯನ್ನು ವಿರೋಧಿಸಿದ್ದು, ದಲಿತರು ಹಾಗೂ ಹಿಂದುಳಿದ ವರ್ಗಗಳು ಹಾಗೂ ಬಡವರ ವಿರೋಧಿಯಾಗಿದ್ದಾರೆ ಎಂದು ಬುಧವಾರ ಆರೋಪಿಸಿದ್ದಾರೆ.
ಬವಾನಾದಲ್ಲಿ ಚುನಾವಣಾ ಸಮಾವೇಶವೊಂದನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಪಕ್ಷವು ಪ್ರಧಾನಿ ನರೇಂದ್ರ ಮೋದಿಗೆ ಹೆದರುವುದಿಲ್ಲ; ಬದಲಿಗೆ, ಪ್ರಧಾನಿಯು ಕಾಂಗ್ರೆಸ್ ಬಗ್ಗೆ ಭಯಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಶೀಷ್ ಮಹಲ್ ವ್ಯಂಗ್ಯದೊಂದಿಗೆ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ಸತತ ಎರಡನೆಯ ದಿನ ವಾಗ್ದಾಳಿ ನಡೆಸಿದ ಅವರು, ಅರವಿಂದ್ ಕೇಜ್ರಿವಾಲ್ ಸ್ವಚ್ಛ ಆಡಳಿತದ ಬಗ್ಗೆ ಮಾತನಾಡುತ್ತಿದ್ದರೂ, ಅವರ ಮೂಗಿನಡಿಯೇ ದಿಲ್ಲಿಯಲ್ಲಿ ಅತಿ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.
ಯಮುನಾ ನದಿಯಲ್ಲಿ ಸ್ನಾನ ಮಾಡುತ್ತೇನೆ ಹಾಗೂ ಅದರ ನೀರನ್ನು ಕುಡಿಯುತ್ತೇನೆ ಎಂಬ ತಮ್ಮ ಭರವಸೆಯಿಂದ ಅರವಿಂದ್ ಕೇಜ್ರಿವಾಲ್ ಹಿಂದೆ ಸರಿದಿದ್ದಾರೆ ಎಂದು ದೂರಿದ ಅವರು, ಯಮುನಾ ನದಿಯ ನೀರನ್ನು ಕುಡಿಯುವಂತೆ ಸವಾಲನ್ನೂ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಇಬ್ಬರೂ ಮೀಸಲಾತಿಯ ವಿರುದ್ಧವಿದ್ದು, ಅವರು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಬಡವರ ವಿರೋಧಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಮೀಸಲಾತಿಯ ಮೇಲೆ ಇರುವ ಶೇ. 50ರಷ್ಟು ಮಿತಿಯನ್ನು ಉಲ್ಲಂಘಿಸುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಭರವಸೆ ನೀಡಲಾರರು. ಯಾಕೆಂದರೆ, ಅವರು ಕೂಡಾ ಮೋದಿಯಂತೆಯೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.