ಪ್ರಯಾಗರಾಜ್: ಮಹಾಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಬುಧವಾರ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೌನಿ ಅಮಾವಾಸ್ಯೆಯ ದಿನವಾದ ಪ್ರಯುಕ್ತ ಕೋಟ್ಯಾಂತರ ಮಂದಿ ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಲು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆಯೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ಉತ್ತರಪ್ರದೇಶದ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬುಧವಾರ ನಸುಕಿನಲ್ಲಿ ತ್ರಿವೇಣಿ ಸಂಗಮ ಪ್ರದೇಶದಲ್ಲಿರುವ ಅಖಾಡ ಮಾರ್ಗದಲ್ಲಿ ಸುಮಾರು 1:00ಯಿಂದ 2.00 ಗಂಟೆಯ ನಡುವೆ ಕಾಲ್ತುಳಿತ ಸಂಭವಿಸಿದೆ. ತ್ರಿವೇಣಿ ಸಂಗಮದ ಪ್ರದೇಶವನ್ನು ತಲುಪಲು ಹಲವಾರು ಮಂದಿ ತಡೆಬೇಲಿಗಳನ್ನು ಏರಿ, ಕೆಳಕ್ಕೆ ಜಿಗಿದಾಗ ಕಾಲ್ತುಳಿತ ಸಂಭವಿಸಿತೆಂದು ವರದಿಗಳು ತಿಳಿಸಿವೆ.
ಉತ್ತರಪ್ರದೇಶ ಸರಕಾರವು ಕಾಲ್ತುಳಿತದಲ್ಲಿ ಉಂಟಾದ ಸಾವುನೋವಿನ ಸಂಖ್ಯೆಯನ್ನು ಅಧಿಕೃತವಾಗಿ 30 ಎಂದು ಘೋಷಿಸಿದೆ. ಆದರೆ ಸುಮಾರು 40 ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಗಳಿಗೆ ತರಲಾಗಿದೆಯೆಂದು ರಾಯ್ಟರ್ಸ್ ವರದಿ ತಿಳಿಸಿದೆ
‘‘ ಇನ್ನೂ ಮೃತದೇಹಗಳು ಬರುತ್ತಲೇ ಇವೆ. ಈಗಾಗಲೇ 40 ಮೃತದೇಹಗಳು ಆಗಮಿಸಿವೆ. ಅವುಗಳನ್ನು ಒಂದರ ನಂತರ ಒಂದರಂತೆ ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸುತ್ತಿದ್ದೇವೆ’’ ಎಂದು ಮೂಲಗಳು ತಿಳಿಸಿವೆ.
►ಚೆಲ್ಲಾಪಿಲ್ಲಿಯಾಗಿ ಹರಡಿದ ಶವಗಳು, ಬ್ಯಾಗ್‌ಗಳು
ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಬ್ಯಾಗ್‌ಗಳು, ಚೀಲಗಳು ಮತ್ತಿತರ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಅಲ್ಲಲ್ಲಿ ಶವಗಳು ಕೂಡಾ ಚದುರಿ ಬಿದ್ದಿವೆ. ಕಾಲ್ತುಳಿತದಿಂದ ಸಾವನ್ನಪ್ಪಿದವರನ್ನು ಗುರುತಿಸಲು ಶೋಕತಪ್ತ ಬಂಧುಗಳು ಸಾಲುಸಾಲಾಗಿ ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ. ಗಾಯಗೊಂಡವರಲ್ಲಿ ಹೆಚ್ಚಿನ ಸಂಖ್ಯೆಯ ಮಂದಿ ಮಹಿಳೆಯರೆಂದು ತಿಳಿದುಬಂದಿದೆ.
ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಲು ಸಾವಿರಾರು ಮಂದಿ ಒಮ್ಮೆಲೇ ಧಾವಿಸಿದ್ದರಿಂದ ನೂಕುನುಗ್ಗಲು ಉಂಟಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತ್ರಿವೇಣಿ ಸಂಗಮಕ್ಕೆ ತೆರಳುವ ವಿವಿಧ ಮಾರ್ಗಗಳಿಗೆ ತಡೆಬೇಲಿಯನ್ನು ಇರಿಸಿ, ಒಂದೇ ಮಾರ್ಗವನ್ನು ಮಾತ್ರವೇ ತೆರೆದಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಜನರಿಗೆ ಮುಂದಕ್ಕೆ ಚಲಿಸಲು ಸಾಧ್ಯವಾಗದಿದ್ದು ಕಾಲ್ತುಳಿತಕ್ಕೆ ಕಾರಣವಾಯಿತೆಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವು ವ್ಯಕ್ತಿಗಳು ಜನದಟ್ಟಣೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ದುರಂತದ ಸಂಭವಿಸಿದ ಪ್ರದೇಶದಲ್ಲಿ ಭಾರೀ ಜನಸಂದಣಿಯಿದ್ದ ಕಾರಣ ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ರಕ್ಷಣಾ ಕಾರ್ಯಕರ್ತರು ಹರಸಾಹಸಪಟ್ಟರು.
ಗಾಯಾಳುಗಳಲ್ಲಿ ಹೆಚ್ಚಿವರನ್ನು ಕುಂಭಮೇಳ ಮೈದಾನದಲ್ಲಿರುವ ಕೇಂದ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬರೇಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
►ಅಮೃತಸ್ನಾನ ಪುನಾರಂಭ
ಕಾಲ್ತುಳಿತ ದುರಂತದ ಬಳಿಕ ಕೆಲವು ತಾಸುಗಳ ಕಾಲ ಸ್ಥಗಿತಗೊಂಡಿದ್ದ ಅಮೃತಸ್ನಾನ ವಿಧಿಯು ಬುಧವಾರ ಮಧ್ಯಾಹ್ನದ ಆನಂತರ ತ್ರಿವೇಣಿ ಸಂಗಮದಲ್ಲಿ ಮತ್ತೆ ಆರಂಭಗೊಂಡಿತು. ಸಾಧು,ಸಂತರುಗಳು ಸಣ್ಣ ಸಣ್ಣ ಗುಂಪುಗಳಾಗಿ ಅಲ್ಲಿಗೆ ತೆರಳುತ್ತಿರುವುದು ಕಂಡುಬಂದಿರುವುದಾಗಿ ಎ.ಎನ್.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.
ಬುಧವಾರದ ಅಮೃತಸ್ನಾನದಲ್ಲಿ 10 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಂಗಳವಾರದವರೆಗೆ ಸುಮಾರು ಮಹಾಕುಂಭಮೇಳಕ್ಕೆ 15 ಕೋಟಿಗೂ ಅಧಿಕ ಮಂದಿ ಆಗಮಿಸಿದ್ದರು. ಜನವರಿ 12ರಿಂದ ಆರಂಭಗೊಳ್ಳುವ ಮಹಾಕುಂಭಮೇಳವು ಫೆಬ್ರವರಿ 26ರವರೆಗೆ ಮುಂದುವರಿಯಲಿದ್ದು, ಒಟ್ಟು 45 ಕೋಟಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
►ಪರಿಸ್ಥಿತಿ ನಿಯಂತ್ರಣದಲ್ಲಿ: ಆದಿತ್ಯನಾಥ್
ಕುಂಭಮೇಳದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ದುರಂತಕ್ಕಾಗಿ ತೀವ್ರ ವಿಷಾದ ವ್ಯಕ್ತಡಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ತಿಳಿಸಿದ್ದಾರೆ.
ದುರಂತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುವುದು. ಅಲ್ಲದೆ ಭಕ್ತಾದಿಗಳು ಅವರವರ ಊರುಗಳಿಗೆ ವಾಪಸಾಗಲು ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಓಡಿಸುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ತಿಳಿಸಿದರು. ಅಲ್ಲದೆ ಭಕ್ತಾದಿಗಳು ವದಂತಿಗಳಿಗೆ ಕಿವಿಗೊಡದಂತೆಯೂ ಮನವಿ ಮಾಡಿದರು.
►ದುರಂತ ಸಂಭವಿಸಿದ ಸಮಯ
ಬುಧವಾರ ನಸುಕಿನಲ್ಲಿ ಬೆಳಗ್ಗೆ 1:00ರಿಂದ 2:00 ಗಂಟೆಯ ನಡುವೆ ನೂರಾರು ಜನರು ತ್ರಿವೇಣಿ ಸಂಗಮ ಸ್ಥಳದ ದಾರಿಯಲ್ಲಿ ಇರಿಸಲಾಗಿದ್ದ ತಡೆಬೇಲಿಯನ್ನು ಹತ್ತಿ ಮುಂದಕ್ಕೆ ಜಿಗಿದಾಗ,ಗೊಂದಲದ ವಾತಾವರಣ ಉಂಟಾಗಿ ಕಾಲ್ತುಳಿತ ಸಂಭವಿಸಿದೆಯೆನ್ನಲಾಗಿದೆ.
►ದಿಕ್ಕುಪಾಲಾಗಿ ಓಡಿದ ಜನರು…
ಅಮೃತಸ್ನಾನಕ್ಕೆ ಬೆಳಗ್ಗೆ 3:00 ಗಂಟೆ ಸಮಯ ನಿಗದಿಯಾಗಿತ್ತು. ಆದುದರಿಂದ ಬೆಳಗ್ಗಿನ ಜಾವದಲ್ಲೇ ಸ್ನಾನಮಾಡಬೇಕೆಂದು ಸಾವಿರಾರು ಮಂದಿ ತ್ರಿವೇಣಿ ಸಂಗಮದ ಬಳಿಯೇ ಮಲಗಿದ್ದರು. ಮಧ್ಯರಾತ್ರಿ 2:00 ಗಂಟೆಯ ಹೊತ್ತಿಗೆ ಏಕಾಏಕಿಯಾಗಿ ನೂರಾರು ಜನರು ತಡೆಬೇಲಿಗಳ ಹತ್ತಿ, ಕೆಳಗೆ ಜಿಗಿದು ತ್ರಿವೇಣಿಸಂಗಮದೆಡೆಗೆ ಓಡತೊಡಗಿದರು. ಆಗ ಹಲವಾರು ಮಂದಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದರು. ಆಗ ಉಂಟಾದ ನೂಕುನುಗ್ಗಲಿನಲ್ಲಿ ಕೆಳಗೆ ಬಿದ್ದವರಿಗೆ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿ ಬಿಹಾರದ ಮೂಲದ ರೇಖಾ ಎಂಬವರು ಹೇಳಿರುವುದಾಗಿ ಅಂಗ್ಲ ಸುದ್ದಿಜಾಲತಾಣವೊಂದು ವರದಿ ಮಾಡಿದೆ.
ತ್ರಿವೇಣಿ ಸಂಗಮದಲ್ಲಿ ನದಿಸ್ನಾನ ಮುಗಿಸಿಕೊಂಡು ಒಂದು ಗುಂಪು ವಾಪಸಾಗುತ್ತಿದ್ದರೆ, ಇನ್ನೊಂದು ಗುಂಪು ಸ್ನಾನಕ್ಕೆ ಇಳಿಯಲು ಧಾವಿಸುತ್ತಿದ್ದುದರಿಂದ ನಿಯಂತ್ರಣ ಮೀರಿ ಜನದಟ್ಟಣೆ ಉಂಟಾಗಿತ್ತು. ಸ್ನಾನ ಮುಗಿಸಿ ವಾಪಸಾಗುತ್ತಿದ್ದ ಅನೇಕ ಮಹಿಳೆಯರು ಈ ಗದ್ದಲ ನಡುವೆ ನೀರಿನಲ್ಲಿ ಬಿದ್ದರು. ಆದರೆ ಅಲ್ಲಿದ್ದವರು ಅವರನ್ನು ರಕ್ಷಿಸುವಲ್ಲಿ ಸಫಲರಾದರೆಂದು ಸ್ಥಳದಲ್ಲಿದ್ದ ಇನ್ನೋರ್ವ ಪ್ರತ್ಯಕ್ಷದರ್ಶಿ ಅಭಿಷೇಕ್ ಕಮಾರ್ ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
►ಕೆಳಗೆ ಬಿದ್ದವರನ್ನು ತುಳಿದುಕೊಂಡೇ ಜನರು ಓಡುತ್ತಿದ್ದರು
‘‘ ಅಲ್ಲಿ ಸಂಪೂರ್ಣ ಗೊಂದಲದ ವಾತಾವರಣವುಂಟಾಗಿತ್ತು. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ತಳ್ಳುತ್ತಿದ್ದರು, ದೂಡುತ್ತಿದ್ದರು. ಆಗ ನನ್ನ ತಾಯಿ ಕುಸಿದುಬಿದ್ದರು. ಆನಂತರ ನನ್ನ ನಾದಿನಿ ಕೂಡಾ ಕೆಳಗೆಬಿದ್ದರು. ನೂರಾರು ಜನರು ಅವರನ್ನು ತುಳಿಯುತ್ತಲೇ ಓಡಿಕೊಂಡು ಹೋದರು’’ ಎಂದು 40 ವರ್ಷದ ಜಗವಂತಿದೇವಿ, ತನ್ನ ಬಂಧುಗಳ ಮೃತದೇಹಳೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಸುದ್ದಿಗಾರರಿಗೆ ತಿಳಿಸಿದ್ದಾರೆ.